ದಕ್ಷಿಣ ಕನ್ನಡ ಪೋಲಿಸ್ ಜಿಲ್ಲಾವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಶಿವಮೊಗ್ಗಕ್ಕೆ ವರ್ಗಾವಣೆ ; ನೂತನ ಎಸ್ಪಿ ಆಗಿ ಸೋನವಾನೆ ರಿಷಿಕೇಶ್ ಭಗವಾನ್ – ಕಹಳೆ ನ್ಯೂಸ್
ಮಂಗಳೂರು, ಎ.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಎಸ್ಪಿ ಎಂದು ಹೆಸರು ಮಾಡಿದ್ದ ಬಿ.ಎಂ. ಲಕ್ಷ್ಮೀಪ್ರಸಾದ್ ಅವರನ್ನು ಶಿವಮೊಗ್ಗ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಎಸ್ಪಿ ಆಗಿ ಸೋನವಾನೆ ರಿಷಿಕೇಶ್ ಭಗವಾನ್ ಅವರನ್ನು ನೇಮಕ ಮಾಡಲಾಗಿದೆ.
ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಲಕ್ಷ್ಮೀಪ್ರಸಾದ್, ಹಲವು ಪ್ರಕರಣಗಳಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಕೆಲಸ ಮಾಡಿ ಭೇಷ್ ಎನಿಸಿದ್ದಾರೆ. ಉಜಿರೆಯ ಬಾಲಕನ ಅಪಹರಣ ಪ್ರಕರಣದಲ್ಲಿ ತುರ್ತು ಕಾರ್ಯಾಚರಣೆ ನಡೆಸಿ, ಎರಡೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಹಾಸನ, ಮಡಿಕೇರಿ ಮೂಲಕ ಕೋಲಾರಕ್ಕೆ ತೆರಳಿ ಅಡಗಿದ್ದ ಆರೋಪಿಗಳು ಅಲ್ಲಿ ತಲುಪಿದ ಕ್ಷಣವೇ ಮಂಗಳೂರಿನ ಪೊಲೀಸರ ತಂಡವೂ ಅಲ್ಲಿಗೆ ತಲುಪಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ್ದ ದ.ಕ. ಎಸ್ಪಿ ನೇತೃತ್ವದ ತಂಡವನ್ನು ಉಸ್ತುವಾರಿ ಸಚಿವರು ಸನ್ಮಾನಿಸಿದ್ದರು.
ನಾಲ್ಕು ತಿಂಗಳ ಹಿಂದೆ ಬಂಟ್ವಾಳದಲ್ಲಿ ಸುರೇಂದ್ರ ಬಂಟ್ವಾಳ್ ಎಂಬಾತನ ಕೊಲೆ ನಡೆದಿತ್ತು. ಸದ್ರಿ ಪ್ರಕರಣದಲ್ಲಿಯೂ ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡಕ್ಕೆ ಮತ್ತು ಎಸ್ಪಿ ಲಕ್ಷ್ಮೀಪ್ರಸಾದ್ ಅವರಿಗೆ ಇಲಾಖೆ ಒಳಗಿಂದಲೇ ಒತ್ತಡಗಳು ಎದುರಾಗಿದ್ದವು. ಆರೋಪಿಗಳ ಪತ್ತೆ ವಿಚಾರದಲ್ಲಿ ಎದುರಾಗಿದ್ದ ಒತ್ತಡವನ್ನು ಲೆಕ್ಕಿಸದೇ ತಮ್ಮ ಕೆಲಸವನ್ನು ಮಾಡಿತ್ತು ಎಸ್ಪಿ ಟೀಮ್. ಈ ಪ್ರಕರಣದಲ್ಲೂ ಎಸ್ಪಿ ಲಕ್ಷ್ಮೀಪ್ರಸಾದ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ನೋಡಲು ತುಂಬ ಸೈಲಂಟ್ ಆಗಿರುವ ಲಕ್ಷ್ಮೀಪ್ರಸಾದ್ ಕೆಲಸ ಮಾತ್ರ ವೇಗದಿಂದ ಕೂಡಿತ್ತು ಅನ್ನುವುದನ್ನು ದಕ್ಷಿಣ ಕನ್ನಡದಲ್ಲಿ ತೋರಿಸಿಕೊಟ್ಡಿದ್ದಾರೆ.
2015ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಸೋನವಾನೆ ರಿಷಿಕೇಶ್ ಭಗವಾನ್ ಯಾದಗಿರಿಯಲ್ಲಿ ಎಸ್ಪಿ ಆಗಿ ಕರ್ತವ್ಯದಲ್ಲಿದ್ದಾರೆ. ಅವರನ್ನು ದ. ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಎಸ್ಪಿ ಆಗಿದ್ದ ಕೆ.ಎಂ. ಶಾಂತರಾಜು ಅವರನ್ನು ಬೆಂಗಳೂರು ಟ್ರಾಫಿಕ್ ವಿಭಾಗದ ಡಿಸಿಪಿ ಆಗಿ ವರ್ಗ ಮಾಡಲಾಗಿದೆ.