Friday, November 22, 2024
ಸುದ್ದಿ

ಭಿನ್ನಾಭಿಪ್ರಾಯ ಸಹಜ, ಮನುಷ್ಯ ಸಂಬಂಧಗಳಷ್ಟೇ ಮುಖ್ಯ; ಎಚ್. ಪಟ್ಟಾಭಿರಾಮ ಸೋಮಯಾಜಿ-ಕಹಳೆ ನ್ಯೂಸ್

ಮಂಗಳೂರು : ಸಹೋದ್ಯೋಗಿಗಳ ಪ್ರೀತಿಯ ಮಾತು, ಸಿಹಿನೆನಪು, ವಿದ್ಯಾರ್ಥಿಗಳಿಂದ ಪ್ರೀತಿಯ ಸನ್ಮಾನ…ನಿವೃತ್ತಿ ಹೊಂದುತ್ತಿರುವ ಉಪನ್ಯಾಸಕನೊಬ್ಬ ಇನ್ನೇನು ತಾನೆ ಬಯಸಿಯಾನು…ನಗರದ ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಸೇವೆಯ ಬಳಿಕ ನಿವೃತ್ತಿ ಹೊಂದಿದ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಎಚ್. ಪಟ್ಟಾಭಿರಾಮ ಸೋಮಯಾಜಿಯವರ ಬೀಳ್ಕೊಡುಗೆ ಸಮಾರಂಭ ಇಂತದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪಟ್ಟಾಭಿರಾಮ ಸೋಮಯಾಜಿಯವರ ಸ್ನೇಹಿತ, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಯಾನಂದ ನಾಯ್ಕ್, “ಪಾಠದಲ್ಲಿ ವಿದ್ಯಾರ್ಥಿಗಳನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಿದ್ದ ಪಟ್ಟಾಭಿ, ಕನ್ನಡ ಪಂಡಿರೂ ಹೌದು. ಋಣಾತ್ಮಕ ಟೀಕೆಗಳನ್ನು ನಗುಮೊಗದಿಂದಲೇ ಸ್ವೀಕರಿಸುವವರು.

ತಮ್ಮ ನಿಲುವು ಮತ್ತು ವೃತ್ತಿಯ ನಡುವೆ ಅಂತರ ಕಾಪಾಡಿಕೊಂಡವರು,” ಎಂದು ಕೊಂಡಾಡಿದರು. ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್, ಪಟ್ಟಾಭಿಯವರು ಕಾಲೇಜಿನ ಬೌದ್ಧಿಕ ಕೊಂಡಿಯಂತಿದ್ದರು, ಎಂದರೆ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಪೂರ್ವತನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ ಎ, ಅಧ್ಯಾಪನವನ್ನು ಪ್ರೀತಿಸಿದ ಪಟ್ಟಾಭಿಯವರು ಸಾಮಾಜಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸುವವರಾಗಿದ್ದರು, ಎಂದು ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮ ವಿಭಾಗದ ಮುಖುಸ್ಥೆ ಡಾ. ಶಾನಿ ಕೆ ಆರ್, ನಿವೃತ್ತರ ಸರಳ ವ್ಯಕ್ತಿತ್ವ, ಅಧ್ಯಯನಶೀಲತೆ, ಕಠಿಣ ಪರಿಶ್ರಮವನ್ನು ಹೊಗಳಿದರು.

ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ ಎನ್ ಕೆ ರಾಜಲಕ್ಷ್ಮೀ, ಪಟ್ಟಾಭಿಯವರು ಒಬ್ಬ ಜ್ಞಾನದಾಹಿ, ವಿದ್ಯಾರ್ಥಿಗಳಲ್ಲೂ ಜ್ಞಾನದಾಹ ಹುಟ್ಟುಹಾಕಿದರು. ಹಲವರ ವ್ಯಕ್ತಿತ್ವ ರೂಪಿಸಿದರು, ಎಂದರು.

ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಕೆ ಲಕ್ಷ್ಮಣ್, ಇತಿಹಾಸ ವಿಭಾಗದ ಮುಖ್ಯಸ್ಥೆ ಪಿ. ರಾಜೇಶ್ವರಿ, ಸಹ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಎಂ, ಭೌತಶಾಸ್ತ್ರ ವಿಭಾಗದ ಅರುಣಾ ಕುಮಾರಿ, ಹಿಂದಿ ವಿಭಾಗದ ಡಾ. ನಾಗರತ್ನ ಎನ್. ರಾವ್, ಹಿರಿಯ ಬೋಧಕೇತರ ಸಿಬ್ಬಂದಿ ಕೃಷ್ಣ ಶೆಟ್ಟಿಗಾರ್ ಮೊದಲಾದವರು ನಿವೃತ್ತರ ಜ್ಞಾನಭಂಡಾರ, ಸ್ನೇಹಪರ ವ್ಯಕ್ತಿತ್ವ, ವಿದ್ಯಾರ್ಥಿ ಪ್ರೀತಿಯನ್ನು ನೆನಪಿಸಿಕೊಂಡರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲ ಡಾ. ಎ ಹರೀಶ, ಪಟ್ಟಾಭಿರಾಮ ಸೋಮಯಾಜಿಯವರ ಅಪಾರ ಅಭಿಮಾನಿ ಬಳಗದ ಕುರಿತು ಅಚ್ಚರಿ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಎಚ್. ಪಟ್ಟಾಭಿರಾಮ ಸೋಮಯಾಜಿ ವಿದ್ಯಾರ್ಥಿಗಳ ಒಡನಾಟ ಕಳೆದುಕೊಳ್ಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

ತಾವು ತಮ್ಮ ಗುರುಗಳಾಗಿದ್ದ ದಿವಂಗತ ಸಾಹಿತಿ ಡಾ. ಯು ಆರ್ ಅನಂತಮೂರ್ತಿಯವರಿಂದ ಪ್ರಭಾವಿತರಾಗಿರುವುದಾಗಿ ಹೇಳಿದ ಅವರು, ಭಿನ್ನಾಭಿಪ್ರಾಯಗಳು ಎಲ್ಲೆಡೆ ಇರುತ್ತವೆ.

ಮನುಷ್ಯ ಸಂಬಂಧಗಳಷ್ಟೇ ಉಳಿಯುತ್ತವೆ, ಎಂದರು. ಸಂಸ್ಥೆಯ ವತಿಯಿಂದ ನಿವೃತ್ತರನ್ನು ಸನ್ಮಾನಿಸಲಾಯಿತು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಎ. ಕುಮಾರ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕಚೇರಿ ಅಧೀಕ್ಷಕಿ ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.