Sunday, November 24, 2024
ಪುತ್ತೂರು

ಪುತ್ತೂರು : ಹೊಸಪೀಳಿಗೆಯ ಕಾಪರ್ ಸಲ್ಪೇಟ್ ಹಾಗೂ ಸುಧಾರಿತ ಪೈಬರ್ ದೋಟಿಯ ಬಗ್ಗೆ ಮಾಹಿತಿ, ನೂತನ ಕೃಷಿ ತಂತ್ರಜ್ಞಾನಗಳನ್ನು ಕೃಷಿಕರಿಗೆ ಪರಿಚಯಿಸುವುದು ಅನಿವಾರ್ಯ ; ರಾಘವೇಂದ್ರ ಭಟ್ ಕೆದಿಲ-ಕಹಳೆ ನ್ಯೂಸ್

ಪುತ್ತೂರು : ಕೃಷಿ ಪಲ್ಲಟಗಳ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನಗಳನ್ನು ಮತ್ತು ಶ್ರಮ ಹಗುರ ಮಾಡುವ ಉಪಕರಣಗಳನ್ನು ಕೃಷಿಕರಿಗೆ ಪರಿಚಯಿಸಬೇಕಾದ ಅನಿವಾರ್ಯತೆ ಇದೆ. ಕೃಷಿರಂಗಕ್ಕೆ ಯುವಕರಿಗೆ ಇಂತಹ ತಂತ್ರಜ್ಞಾನಗಳು ಸುಲಭದಲ್ಲಿ ಸಿಗುವಂತಾಗಬೇಕು ಎಂದು ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪುತ್ತೂರು ತೆಂಕಿಲದ ಚುಂಚಶ್ರೀ ಸಭಾಭವನದಲ್ಲಿ ಶನಿವಾರ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಯುಪಿಎಲ್ ಲಿಮಿಟೆಡ್ ಮುಂಬಯಿ ಇವರ ಸಹಕಾರದಲ್ಲಿ ನಡೆದ ಹೊಸಪೀಳಿಗೆಯ ಕಾಪರ್ ಸಲ್ಪೇಟ್ ಹಾಗೂ ಸುಧಾರಿತ ಪೈಬರ್ ದೋಟಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನ ಅಡಿಕೆ ಬೆಳೆಗಾರರಿಗೆ ಮಳೆಗಾಲದಲ್ಲಿ ಅಡಿಕೆ ಮರಗಳಿಗೆ ಬಾಧಿಸುವ ಮಹಾಳಿ ರೋಗಕ್ಕೆ ಬೋರ್ಡೋ ಸಿಂಪಡಣೆ ಪಾರಂಪರಿಕವಾಗಿದೆ. ಇದನ್ನು ಇನ್ನೂ ಬೋರ್ಡೋ ದ್ರಾವಣದ ಹೊಸ ರೀತಿಯ ಪರಿಚಯದಿಂದ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಅದರ ಜೊತೆಗೆ ಬೋರ್ಡೋ ಸಿಂಪಡಣೆಗೆ ಸುಲಭ ಸಾಧನಗಳ ಅವಶ್ಯಕತೆಗಳು ಇವೆ. ಇದೆರಡರ ಪರಿಚಯ ಪರಿಚಯ ಮತ್ತು ಪ್ರಾತ್ಯಕ್ಷಿಕೆ ಮಾಡಿರುವುದು ಶ್ಲಾಘನೀಯ ಎಂದರು. ಯುಪಿಎಲ್ ಲಿಮಿಟೆಡ್ ನ ವಿಭಾಗೀಯ ಮೆನೇಜರ್ ಸಂಗಮೇಶ್ ಮಾತನಾಡಿ ಹೊಸತಂತ್ರಜ್ಞಾನದ ಕಾಪರ್ ಸಲ್ಫೇಟ್ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ. ಸಣ್ಣ ಕಣಗಳ ಮೂಲಕ ಅಡಿಕೆ ಮರದ ಗೊಂಚಲುಗಳಿಗೆ ನೇರವಾಗಿ ತಲುತ್ತದೆ ಹಾಗೂ ಇದರ ಜೊತೆಗೆ ಶೀಲೀಂದ್ರ ನಾಶಕವೂ ಜೊತೆಯಾಗುವುದರಿಂದ ಅಡಿಕೆಗೆ ಕೊಳೆರೋಗ ಬಾಧಿಸುವುದು ಕಡಿಮೆಯಾಗುತ್ತದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಮಾತನಾಡಿ ಅಡಿಕೆ ಬೆಳೆಗಾರರ ಭವಿಷ್ಯದ ದೃಷ್ಟಿಯಿಂದ ವಿನೂತನ ಬಗೆಯ ಉತ್ಪನ್ನಗಳನ್ನು ಪರಿಚಯ ಮಾಡುವುದು ಹಾಗೂ ಅವುಗಳ ಬಗ್ಗೆ ಅಧ್ಯಯನ ಮತ್ತು ಪ್ರಯೋಜನಗಳ ಬಗ್ಗೆ ಬೆಳೆಗಾರರಿಗೆ ತಿಳಿಸುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಯಲ್ಲಿ ಹೊಸ ವಿಧಾನಗಳ ಬಗ್ಗೆಯೂ ಪರಿಚಯ ಮಾಡಲಾಗುವುದು ಎಂದರು. ಸುಧಾರಿತ ಪೈಬರ್ ದೋಟಿಯನ್ನು ಆವಿಷ್ಕಾರ ಮಾಡಿರುವ ಇಂಜಿನಿಯರ್ ಬಾಲಸುಬ್ರಹ್ಮಣ್ಯ ಹಾನಗಲ್ಲು ಪ್ರಾತ್ಯಕ್ಷಿಗೆ ನಡೆಸಿಕೊಡುತ್ತಾ, ಅಡಿಕೆ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಬಗೆಯ ದೋಟಿಯನ್ನು ಪರಿಚಯಿಸಲಾಗಿದೆ. ಈಗ ಸುಧಾರಿತ ದೋಟಿಯನ್ನೂ ಆವಿಷ್ಕಾರ ಮಾಡಲಾಗಿದೆ. ಸೂಕ್ತ ರೀತಿಯಲ್ಲಿ ಬಳಕೆ ಮಾಡುತ್ತಿರುವ ಅನೇಕ ಬೆಳೆಗಾರರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕೃಷಿಕರ ಮೆಚ್ಚುಗೆ ಪಡೆಯುತ್ತಿರುವುದರಿಂದ ಇನ್ನಷ್ಟು ಅಭಿವೃದ್ಧಿ ಪಡಿಸಲು ಹುಮ್ಮಸ್ಸಾಗಿದೆ ಎಂದರು. ವೇದಿಕೆಯಲ್ಲಿ ಮಂಗಳೂರಿನ ಸುಮಂಗಳಾ ಏಜೆನ್ಸಿಯ ಮುಖ್ಯಸ್ಥ ಇಗ್ನೇಶಿಯಸ್ ಡಿಸೋಜಾ ಉಪಸ್ಥಿತರಿದ್ದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಾಮ ಕಿಶೋರ್ ಮಂಚಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಹೊಸಪೀಳಿಗೆಯ ಕಾಪರ್ ಸಲ್ಪೇಟ್ ಬಗ್ಗೆ ಮಾಹಿತಿ ಹಾಗೂ ಅಡಿಕೆ ಕೊಯಿಲು ಹಾಗೂ ಬೋರ್ಡೋ ಸಿಂಪಡಣೆಗೆ ಸುಧಾರಿತ ಫೈಬರ್ ದೋಟಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮಣ್ಣಿನ ತೇವಾಂಶವನ್ನು ಕಾಪಿಡುವ ಹಾಗೂ ಮಣ್ಣಿಗೆ ಹಾನಿಕಾರಕವಲ್ಲದ ಕಳೆನಾಶಕವನ್ನು ಪರಿಚಯಿಸಲಾಯಿತು.