ಕಲೆ, ಸಾಹಿತ್ಯ ಕ್ಷೇತ್ರದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸ ನಿರಂತರ ಆಗಬೇಕಾಗಿದೆ; ಡಾ. ಪ್ರಭಾಕರ ಭಟ್-ಕಹಳೆ ನ್ಯೂಸ್
ಬಂಟ್ವಾಳ : ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು, ಕಲೆ, ಸಾಹಿತ್ಯ ಕ್ಷೇತ್ರದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸ ನಿರಂತರ ಆಗಬೇಕಾಗಿದ್ದು, ಇಂತಹಾ ಕೆಲಸ ವಿಜಯಕುಮಾರ್ ಕೊಡಿಯಾಲ್ ಬೈಲ್ ರಂತಹಾ ರಂಗನಿರ್ದೇಶಕರಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಅವರು ಮೈತ್ರಿ ಕಲ್ಲಡ್ಕದ ಆಶ್ರಯದಲ್ಲಿ ಕಲ್ಲಡ್ಕದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶಿವದೂತೆ ಗುಳಿಗ ನಾಟಕದ ಸಂದರ್ಭದಲ್ಲಿ ನಡೆದ ತ್ರಿಮೂರ್ತಿ ಕಲಾವಿದರ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟೀ, ಗೊಂಬೆ, ಶಾಲೆ, ನಾಟಕ, ರಾಜಕೀಯ, ಎಲೆಕ್ಟ್ರಾನಿಕ್ಸ್ ಹೀಗೆ ಎಲ್ಲಾ ರಂಗದಲ್ಲೂ ಕಲ್ಲಡ್ಕ ತನ್ನದೇ ಆದ ಹಿರಿಮೆಯನ್ನು ಪಡೆದುಕೊಂಡು, ಜಗತ್ತನ್ನು ಗೆದ್ದಿದ್ದು ಇದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಹಾಗೂ ಕಲಾಕ್ಷೇತ್ರಕ್ಕೆ ಹೊಸ ಮೆರುಗು ನೀಡಿದ ಕೊಡಿಯಾಲ್ ಬೈಲ್ ರ ಜೊತೆಯಲ್ಲಿ ಸಂಗೀತ ನಿರ್ದೇಶಕ ವಿಜಯ್ ಕೋಕಿಲರ ಶ್ರದ್ಧೆ ಎಲ್ಲರ ಗೌರವಾರ್ಹ ಎಂದ ಅವರು, ಶಾಂತಾರಾಮ್ ಕಲ್ಲಡ್ಕ, ರಾಮಣ್ಣ ಬಲ್ಯಾಯ, ಸೀತಾರಾಂ ಇವರೆಲ್ಲರೂ ದಿವಂಗತರಾಗಿದ್ದರೂ, ಅವರು ಕಲಾಕ್ಷೇತ್ರದಲ್ಲಿ ಕಟ್ಟಿ ಕೊಟ್ಟಂತಹ ಆದರ್ಶಗಳು ಸಾರ್ವಕಾಲಿಕ ಎಂದು ಅಭಿಪ್ರಾಯಿಸಿದರು. ಇದೇ ಸಂದರ್ಭದಲ್ಲಿ ಕಲಾಸಂಗಮದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಸಂಗೀತ ನಿರ್ದೇಶಕ ವಿಜಯ್ ಕೋಕಿಲರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಆಧುನಿಕತೆಯ ಈ ಕಾಲಘಟ್ಟದಲ್ಲೂ ಜನರಲ್ಲಿ ಸಂಸ್ಕಾರ ಗೌರವ ಇನ್ನೂ ಉಳಿದಿದೆ ಎನ್ನುವುದಕ್ಕೆ ದೈವಾರಾಧನೆಯ ಮಹತ್ವದ ನಾಟಕಕ್ಕೆ ಇಲ್ಲಿ ಸೇರಿರುವ ಪ್ರೇಕ್ಷಕರೇ ಸಾಕ್ಷಿ ಎಂದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ನೆರೆ ರಾಜ್ಯ ಹಾಗೂ ವಿದೇಶದಲ್ಲೂ ಶಿವದೂತೆ ಗುಳಿಗ ನಾಟಕವನ್ನು ಬೇರೆ ಬೇರೆ ಭಾಷಗಳಲ್ಲಿ ಪ್ರದರ್ಶಿಸಲು ಸಿದ್ದತೆ ನಡೆದಿದೆ ಎಂದರು. ಮತ್ತು ಹಿರಿಯ ರಂಗಕಲಾವಿದ ಮಂಜು ವಿಟ್ಲ ಸನ್ಮಾನಿತರ ಪರಿಚಯ ಮಾಡಿದರು. ಹಿರಿಯ ಕಲಾವಿದ, ಬಲ್ನಾಡು ಉಳ್ಳಾಳ್ತಿ ದೈವಸ್ಥಾನ ದ ಆಡಳಿತ ಧರ್ಮದರ್ಶಿ ಬಿ.ಕೆ.ರಾಜ್ ನಂದಾವರ, ತ್ರಿಮೂರ್ತಿ ಕಲಾವಿದರಾದ ದಿ.ಶಾಂತಾರಾಮ್ ಕಲ್ಲಡ್ಕ, ದಿ.ರಾಮಣ್ಣ ಬಲ್ಯಾಯ ಹಾಗೂ ದಿ.ಸೀತಾರಾಮ ರನ್ನು ಸ್ಮರಿಸಿದರು. ಇವರ ಪುತ್ರರಾದ ಸವ್ಯರಾಜ್ ಕಲ್ಲಡ್ಕ, ಗೋಪಾಲ್ ಕಲ್ಲಡ್ಕ ಹಾಗೂ ಪುನೀತ್ ರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮಾಜಿ ಶಾಸಕರಾದ ರುಕ್ಮಯಪೂಜಾರಿ, ಪ್ರಮುಖರಾದ ಕೃಷ್ಣಪ್ಪ ದೋಟ, ಪದ್ಮನಾಭ ಕೊಟ್ಟಾರಿ, ತಾ.ಪಂ.ಸದಸ್ಯ ಮಹಾಬಲ ಆಳ್ವ, ಅನಿಲ್ ಪಂಡಿತ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಬಜಾರ್ ಗೋಪಾಲಕೃಷ್ಣ ಆಚಾರ್ಯ, ಜಯಾನಂದ ಆಚಾರ್ಯ, ಅಬೂಬಕರ್, ಶಿವರಾಮ ಹೊಳ್ಳ ಲಕ್ಷ್ಮೀನಿವಾಸ ಮೊದಲಾದವರು ವೇದಿಕೆಯಲ್ಲಿದ್ದರು. ಮೈತ್ರಿ ಕಲ್ಲಡ್ಕದ ಸಂಸ್ಥಾಪಕ ಚಿ.ರಮೇಶ್ ಕಲ್ಲಡ್ಕ ಸ್ವಾಗತಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾಸಂಗಮ ಕಲಾವಿದರು ಕುಡ್ಲ ತಂಡದಿಂದ ಶಿವದೂತೆ ಗುಳಿಗೆ ನಾಟಕದ 99 ನೇ ಪ್ರದರ್ಶನ ನಡೆಯಿತು.