ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಮನೆ, ಆಸ್ತಿ ಜಫ್ತಿಗೆ – ಕಹಳೆ ನ್ಯೂಸ್
ಮಂಗಳೂರು: ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸ್ಜಿದ್ ಮುಸ್ಲಿಂ ಜಮಾತ್ ನ ಅಧ್ಯಕ್ಷ ಅವಧಿಯಲ್ಲಿ ಎನ್.ಬಿ. ಅಬೂಬಕ್ಕರ್ ಅವರು ಸಮುದಾಯಭವನ ನಿರ್ಮಾಣದಲ್ಲಿ ಅಕ್ರಮ ಎಸಗಿದ್ದು, ಸಿಎಜಿ ವರದಿಯಲ್ಲಿ 27.53 ಲಕ್ಷ ರು ಹಾಗೂ ಕಟ್ಟಡ ಮೌಲ್ಯ ಮಾಪನದಲ್ಲಿ 21.43 ಲಕ್ಷ ರೂಪಾಯಿ ಒಟ್ಟಿಗೆ (48.96 ಲಕ್ಷ ) ಸ್ವಂತಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.
ತಾನು ಬಳಸಿಕೊಂಡ ಹಣವನ್ನು ವಖ್ಫ್ ಇಲಾಖೆ ವಸೂಲಾತಿಗೆ ಕ್ರಮ ತೆಗೆದು ಕೊಂಡಾಗ ಹೈಕೋರ್ಟಿಗೆ ಅರ್ಜಿ ಹಾಕಿದ್ದು ಹೈಕೋರ್ಟ್ ತಡೆಯಾಜ್ಞೆ ಕೊಡುವ ಸಂಧರ್ಭದಲ್ಲಿ ವಸೂಲಾತಿಯ ಶೇಕಡಾ *50%* ರಷ್ಟು ಹಣವನ್ನು ಠೇವಣಿ ರೂಪದಲ್ಲಿ ನ್ಯಾಯಾಲಯದಲ್ಲಿ ಇಡಲು ಆದೇಶ ನೀಡಿತ್ತು, ಆದರೆ ಠೇವಣಿ ಹಣ ಪಾವತಿಸಲು ಈತ ಅಸಮರ್ಥರಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಹಣ ವಸೂಲಿಗೆ ಕ್ರಮ ಮುಂದುವರಿಸುವಂತೆ ವಕ್ಫ್ ಇಲಾಖೆಗೆ ಆದೇಶ ನೀಡಿತ್ತು,
ಈ ಪರಿಸ್ಥಿತಿ ಹೇಗೆ ಬಂತು ಏಕೆ ಬಂತು ಎಂದು ತಿಳಿಯಬೇಕಾದರೆ ಹತ್ತು ವರ್ಷ ಹಿಂದೆ ಹೋಗಬೇಕು
2010ರಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ಅವರು ಜಮಾತ್ ಅಧ್ಯಕ್ಷರಾಗಿದ್ದಾಗ ಬೈಕಂಪಾಡಿ ಜುಮ್ಮಾ ಮಸೀದಿ ಸೇರಿದ ಅಡ್ಕ ಸಮುದಾಯ ಭವನ ನಿರ್ಮಾಣ ಮಾಡಿದ್ದರು.
50 ಲಕ್ಷ ರು. ವಕ್ಫ್ ಅನುದಾನ, 50 ಲಕ್ಷ ರು. ವಕ್ಫ್ ಸಾಲ ಮತ್ತು 35 ಲಕ್ಷ ರು. ದಾನಿಗಳ ನೆರವಿನಿಂದ ಸಮುದಾಯ ಭವನ 2010 ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು,
ಅದಕ್ಕೆ ಖರ್ಚು 1.13 ಕೋಟಿ ರು. ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮೌಲ್ಯಮಾಪನ ಮಾಡಿದ್ದರು. ಇದನ್ನು ಆಕ್ಷೇಪಿಸಿ ಅಬೂಬಕ್ಕರ್ ಅವರು ಮರು ಮೌಲ್ಯ ಮಾಪನ ಮಾಡಬೇಕು ಎಂದು ಮನವಿ ಮಾಡಿದರು. ಆದರೆ ಎರಡನೇ ಬಾರಿ ಎಂಜಿನಿಯರ್ ಒಬ್ಬರು, ಅಬೂಬಕ್ಕರ್ ಅವರ ಪ್ರಭಾವಕ್ಕೆ ಮಣಿದು 2.12 ಕೋಟಿ ರು ಮೌಲ್ಯ ಮಾಪನ ಮಾಡಿದರು.
ಈ ಮೌಲ್ಯಮಾಪನ ಮೋಸದಿಂದ ಕೂಡಿರುವುದು ಗಮನಕ್ಕೆ ಬಂದಾಗ ವಕ್ಫ್ ಬೋರ್ಡ್ ಅಧಿಕಾರಿಯ ಮೂಲಕ ತನಿಖೆ ನಡೆಸಿತು. ಈ ತನಿಖೆಯಿಂದ ಮರು ಮೌಲ್ಯ ಮಾಪನವು ಮೋಸದಿಂದ ಕೂಡಿರುವುದು ರುಜುವಾತಾಯಿತು,
ಇದಕ್ಕೆ ಕಾರಣ ಹೊಸ ಜಮಾತ್ ಸಮಿತಿ :
2004ರಿಂದ 2013 ಡಿಸೆಂಬರ್ ವರೆಗೆ ಅಬೂಬಕ್ಕರ್ ಅಧ್ಯಕ್ಷರಾಗಿದ್ದರು. ಚುನಾವಣೆ ಮಾಡಲು ಒಪ್ಪದೆ ತಾನು ಅಧ್ಯಕ್ಷರಾಗಿ ಮುಂದುವರಿಯಲು ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದರು,
ಆದರೆ ಹೈಕೋರ್ಟ್ ಚುನಾವಣೆ ನಡೆಸಲು ಆದೇಶ ಮಾಡಿತ್ತು. ಎದುರಾಳಿ ತಂಡ ಬಿ.ಎ.ಅಬ್ದುಲ್ ನಾಸಿರ್ (ಲಕ್ಕಿಶ್ಟಾರ್) ಅಧ್ಯಕ್ಷತೆಯ ನೇತೃತ್ವದಲ್ಲಿ 11 ಮಂದಿ ಶೇ.85 ಮತ ಗಳಿಸಿ ಜಯಭೇರಿ ಬಾರಿಸಿತ್ತು.
ಈ ಹಿಂದೆ ಸಮುದಾಯ ಭವನ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದು ಜಮಾತ್ ಮುಖಂಡರು ಸಹಿ ಮಾಡಿ ದೂರು ನೀಡಿದ್ದರು. 49 ಲಕ್ಷ ಹಗರಣ ಆಗಿದೆ ಎಂದು ಸಿಎಜಿ ವರದಿ ನೀಡಿತು. ವರ್ಕ್ಪ್ ಬೋರ್ಡ್ ನೋಟಿಸ್‌ಗಳ ಮೇಲೆ ನೋಟಿಸ್ ಜಾರಿಗೊಳಿಸಿತು.
ಸಮರ್ಪಕವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಅಬೂಬಕ್ಕರ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಜಿಲ್ಲಾಧಿಕಾರಿಗೆ ವಕ್ಫ್ ಬೋರ್ಡ್ 29-07- 2019ರಲ್ಲಿ ಆದೇಶ ಮಾಡಿತು. ಮನೆ ಏಲಂ ನೋಟಿಸ್ ನೀಡಿದ ಬಳಿಕ ಅಬೂಬಕ್ಕರ್ ಅವರು ತಮ್ಮ ಮನೆಯ ಆಸ್ತಿ ಮೌಲ್ಯಮಾಪನ ಸರಿಯಾಗಿಲ್ಲ ಎಂದು ಹೈಕೋರ್ಟ್ಗೆ ಮೊರೆ ಹೋಗಿದ್ದು ಸದ್ಯಕ್ಕೆ 27.53 ಲಕ್ಷದ ಹಗರಣಕ್ಕೆ ಮಾತ್ರ ತಡೆಯಾಜ್ಞೆ ಸಿಕ್ಕಿದೆ. ಆದರೆ ಅವರು ಹಣ ಗುಳುಂ ಮಾಡಿಲ್ಲ ಎಂದು ಹೈಕೋರ್ಟಿಗೆ ಹೇಳದೆ ಇರೋದು ಗಮನಿಸಬೇಕಾದ ಅಂಶ.
ಆದರೆ ಇನ್ನೊಂದು ಪ್ರಕರಣ (21.43 ಲಕ್ಷ ರು. ಹಗರಣ)ದಲ್ಲಿ ತಡೆಯಾಜ್ಞೆ ಸಿಗದೆ 2021ರ ಜ,7ರಂದು ಜಫ್ತಿಗೆ ಆದೇಶ ಬಂದಿದೆ. ಕಂದಾಯ ನೀರಿಕ್ಷಕರು ತಹಸೀಲ್ದಾರ್ ಮೂಲಕ ನೋಟಿಸ್ ನೀಡಿದ್ದು, ಮಾ.27ಕ್ಕೆ ಅವಧಿ ಕೂಡಾ ಮುಗಿದಿದೆ. ಯಾವಾಗ ಬೇಕಾದರೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು
ತಮ್ಮವರ ಹೆಸರಿಗೆ ಚೆಕ್..! :
2009ರಿಂದ 2014ವರೆಗಿನ ಆಡಿಟ್ ವರದಿಯಲ್ಲಿ ವಕ್ಫ್ ಹಣ ದುರುಪಯೋಗ ಪಡಿಸಿರುವುದು ಬೆಳಕಿಗೆ ಬಂದಿದೆ.
ವಕ್ಫ್ ನಿಂದ ಬಂದ ಹಣದಲ್ಲಿ ಸಹೋದರರಾದ (ರೌಡಿಶೀಟರ್)ಗಳಾದ
ಎನ್.ಬಿ. ಉಸ್ಮಾನ್ ಮತ್ತು ಎನ್.ಬಿ. ರಪೀಕ್ ಹೆಸರಿಗೆ ಮತ್ತು ತನ್ನ ಖಾತೆಗೆ ಒಟ್ಟು 26.73 ಲಕ್ಷ ರು. ವರೆಗೆ ಜಮೆ ಮಾಡಿದ್ದಾರೆ.
_ಮಸೀದಿಗೆ ಸಂಬಂಧವೇ ಇಲ್ಲದ ಗುತ್ತಿಗೆದಾರ ರಾಜಾರಾಮ್ ಸಾಲ್ಯಾನ್ ಅವರಿಗೆ 80 ಸಾವಿರ ರು. ನೀಡಲಾಗಿದೆ !_
ಮಹಾಸಭೆಗೆ ಅಬೂಬಕ್ಕರ್ ಆಕ್ಷೇಪ :
ಬಹುತೇಕ ಎಲ್ಲ ಸಂಘ ಸಂಸ್ಥೆಗಳಲ್ಲಿ ಮಹಾಸಭೆ ಕರೆಯದೆ ಇರುವುದಕ್ಕೆ ಗಲಾಟೆಗಳಾಗುವುದು. ಇದೀಗ ಎನ್.ಬಿ. ಅಬೂಬಕರ್ ಅವರು ಮಹಾಸಭೆ ಕರೆಯಬಾರದು, ಜಮಾತ್‌ಗೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಹೈಕೋರ್ಟ್ನಲ್ಲಿ ರಿಟ್ ಅರ್ಜಿಗಳನ್ನು ಸತತವಾಗಿ ಹಾಕುತ್ತಿದ್ದಾರೆ. ಆದರೆ ಯಾವುದಕ್ಕೂ ತಡೆಯಾಜ್ಞೆ ಸಿಕ್ಕಿಲ್ಲ.
_ಮಾಡಿದ್ದುಣ್ಣೊ ಮಾರಾಯ ಎಂಬಂತೆ ಇದೀಗ ಮನೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ತಲುಪಿ ಹತಾಶರಾಗಿರುವ ಅಬೂಬಕ್ಕರ್ ಮಹಾಸಭೆ ನಡೆಯದಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ._
ಅಂತರ ಕಾಯ್ದ ಕೊಂಡ ಬಿಜೆಪಿ ನಾಯಕರು :
ರಾಜ್ಯದ ವಕ್ಫ್ ಹಗರಣಗಳನ್ನು ಬಯಲಿಗೆ ಎಳೆದು ನಿರಂತರ ಹೋರಾಟ ಮಾಡಿದ್ದು ಬಿಜೆಪಿಯ ಪ್ರಾಮಾಣಿಕ ಮುಖಂಡ ಅನ್ವರ್ ಮಾಣಿಪ್ಪಾಡಿ. ಇದೀಗ ಸ್ವಪಕ್ಷೀಯರೇ ವಕ್ಫ್ ಹಗರಣದಲ್ಲಿ ಸಿಲುಕಿರುವುದು ಬಿಜೆಪಿಗೆ ಮುಜುಗರ ತರಿಸಿದೆ. ಹೀಗಾಗಿ ಬಿ.ಜೆ.ಪಿಯ ಪ್ರಮುಖ ನಾಯಕರು ಅಬೂಬಕ್ಕರ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ,