ಬೈಕ್ ಸ್ಕಿಡ್ ಆಗಿ ತಾಯಿ ಮಗ ರಸ್ತೆಗೆ ಬಿದ್ದು ಗಾಯ; ಟ್ರಾಫಿಕ್ ಪೊಲೀಸರದ್ದೆ ತಪ್ಪು ಎಂದು ಹಲ್ಲೆಗೆ ಮುಂದಾದ ಸಾರ್ವಜನಿಕರು-ಕಹಳೆ ನ್ಯೂಸ್
ಬಳ್ಳಾರಿ : ಬಳ್ಳಾರಿ ನಗರದ ಸಂಗಮ್ ಸರ್ಕಲ್ ಬಳಿ ಪೊಲೀಸರು ಫೈನ್ ಹಾಕುತ್ತಾರೆ ಎಂಬ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಮತ್ತು ಆತನ ತಾಯಿ ಇದ್ದ ಬೈಕ್ ಸ್ಕಿಡ್ ಆಗಿದ್ದು, ಇದು ಪೊಲೀಸರದ್ದೇ ತಪ್ಪಿನಿಂದ ನಡೆದ ಘಟನೆ ಎಂದು ತಪ್ಪು ತಿಳಿದ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ.
ತಾಯಿ ಮಗ ಬೈಕ್ ನಲ್ಲಿ ಹೆಲ್ಮೆಟ್ ಹಾಕದೇ ಬಂದಿದ್ದು, ಪೊಲೀಸರ ಕೈಗೆ ಸಿಕ್ಕಿದರೆ ಫೈನ್ ಕಟ್ಟಬೇಕಾಗುತ್ತದೆ ಎಂದು ಹೆದರಿ ಒಂದೇ ಬಾರಿಗೆ ಬೈಕ್ ಸವಾರ ಬೈಕ್ ನ್ನು ವಿರುದ್ಧ ದಿಕ್ಕಿಗೆ ತಿರುಗಿಸಲು ಯತ್ನಿಸಿದ್ದರು. ಈ ವೇಳೆಯಲ್ಲಿ ಬೈಕ್ ಸ್ಕಿಡ್ ಆಗಿ ತಾಯಿ ಮಗ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಮೇಲ್ನೋಟಕ್ಕೆ ಇದನ್ನು ಗಮನಿಸಿದಾಗ ಇದು ಪೊಲೀಸರದ್ದೇ ತಪ್ಪು ಎಂದು ಕಂಡು ಬಂದಿದ್ದರಿಂದ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ವಾಗ್ಯುದ್ಧ ನಡೆದಿದೆ. ಇದೇ ಸಂದರ್ಭದಲ್ಲಿ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.