ಆರ್ತಿಬೈಲ್ ಘಟ್ಟದ ಬಳಿ ದಿಬ್ಬಕ್ಕೆ ಡಿಕ್ಕಿ ಹೊಡೆದ ಬಸ್; 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ-ಕಹಳೆ ನ್ಯೂಸ್
ಯಲ್ಲಾಪುರ : ಕಳಚೆ-ಯಲ್ಲಾಪುರ ನಡುವಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಘಟ್ಟದ ಬಳಿ ದಿಬ್ಬಕ್ಕೆ ಬಸ್ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ 15 ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು ಪರೀಕ್ಷೆ ನಡೆಯುವುದರಿಂದ ತುಸು ಮೊದಲೇ ಕಾಲೇಜಿಗೆ ಬರುತ್ತಿದ್ದರು. ಗಾಯಾಳುಗಳನ್ನು 18 ವರ್ಷದ ಸ್ವಾತಿ ಸಂತೋಷ ನಾಯ್ಕ ತೆಲಂಗಾರ, 16 ವರ್ಷದ ರಂಜನಾ ಜಿ.ಕುಣಬಿ ವಜ್ರಳ್ಳಿ, 18 ವರ್ಷದ ಚೈತ್ರಾ ಚಂದ್ರು ಪೂಜಾರ ಹೊನ್ನಗದ್ದೆ, 18 ವರ್ಷದ ಸಂದ್ಯಾ ಎಸ್ ಅಂಬೀಗ ಹೊನ್ನಗದ್ದೆ, 18 ವರ್ಷದ ರಜನಿ ಮರಾಠೆ, 16 ವರ್ಷದ ಸ್ವಾತಿ ಗಾಂವ್ಕರ ತೆಲಂಗಾರ, 18 ವರ್ಷದ ಅರ್ಪಿತಾ ಭಟ್ಟ ಹೊನಗದ್ದೆ, 18 ವರ್ಷದ ಶಿಲ್ಪಾ ಕಳಸ, 18 ವರ್ಷದ ಚೈತನ್ಯ ಪೂಜಾರಿ ಹೊನ್ನಗದ್ದೆ, 17 ವರ್ಷದ ಸುನಿತಾ ಕಳಸ ಕಳಚೆ, 65 ವರ್ಷದ ಪರಮೇಶ್ವರ ಎನ್.ಭಟ್ ಕಳಚೆ, 42 ವರ್ಷದ ಸೀತಾರಾಮ ಗೌಡ ಕಳಚೆ ಅವರುಗಳೆಂದು ಗುರುತಿಸಲಾಗಿದೆ. ಇವರೆಲ್ಲರೂ ಕಳಚೆಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದು, ಗಾಯಗೊಂಡ ವಿದ್ಯಾರ್ಥಿಗಳು ಸರ್ಕಾರಿ ಪಿಯು ಕಾಲೇಜ್, ವೈಟಿಎಸ್‍ಎಸ್ ಪಿಯು ಕಾಲೇಜು, ಮದರ್ ತೆರೇಸಾ ಆಂಗ್ಲಮಾಧ್ಯಮ ಶಾಲೆ, ವಿಶ್ವದರ್ಶನ ಪ್ರೌಢಶಾಲೆಗೆ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಹಾಗೂ ಸ್ಥಳಕ್ಕೆ ಸಚಿವ ಶಿವರಾಮ ಹೆಬ್ಬಾರ್ ತೆರಳಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.