ಕೋವಿಡ್ ನಿಯಮ ಪಾಲಿಸಿಕೊಂಡು ಪುತ್ತೂರು ಜಾತ್ರೆ ; ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಪತ್ರಿಕಾ ಹೇಳಿಕೆ – ಕಹಳೆ ನ್ಯೂಸ್
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಎ.೧೦ರಿಂದ ೨೦ರವರೆಗೆ ಪೂರ್ವಶಿಷ್ಠ ಸಂಪ್ರದಾಯದಂತೆ ನಡೆಯಲಿದೆ. ಕೊರೋನಾ ಮುನ್ನೆಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಈ ಬಾರಿಯ ವಾರ್ಷಿಕ ಜಾತ್ರೋತ್ಸವವನ್ನು ಯಾವುದೇ ವಿಧಿ ವಿಧಾನಗಳಿಗೆ ಚ್ಯುತಿಯಾಗದಂತೆ ನಡೆಸಲಾಗುತ್ತದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅವರು ತಿಳಿಸಿದ್ದಾರೆ.
ಸೀಮೆಯ ಭಕ್ತಾಧಿಗಳು ಕೊರೋನಾ ಮುನ್ನೆಚರಕೆ ಕ್ರಮಗಳನ್ನು ಕಡ್ಡಾಯವಾಗಿ ಜಾತ್ರಾ ಸಂದರ್ಭದಲ್ಲಿ ಪಾಲಿಸುವುದು, ಭಕ್ತಾಧಿಗಳು ಮಾಸ್ಕ್ ಧರಿಸಿ ದೇವಳದ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಜರಗುವ ಜಾತ್ರೋತ್ಸವದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಯಾವುದೇ ಜನದಟ್ಟನೆಗೆ ಅವಕಾಶವಾಗದ ರೀತಿಯಲ್ಲಿ ಭಾಗಿಗಳಾಗಿ ಸಹಕರಿಸಬೇಕು. ಪುತ್ತೂರು ಜಾತ್ರೆಯ ಧ್ವಜಾರೋಹಣದಿಂದ ತೊಡಗಿ ಪೇಟೆ ಸವಾರಿ, ಚಂದ್ರಮಂಡಲ ಉತ್ಸವ, ಬಲ್ನಾಡು ಶ್ರೀ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು ಆಗಮನ, ಸಣ್ಣ ರಥೋತ್ಸವ, ಬ್ರಹ್ಮರಥೋತ್ಸವ, ವೀರಮಂಗಲ ಅವಭ್ರತ ಸವಾರಿ, ದೈವಗಳ ನೇಮ ಸಹಿತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಪೇಟೆ ಸವಾರಿಯ ಸಂದರ್ಭ ಭಕ್ತರು ದೇವರು ಬರುವ ದಾರಿಯಲ್ಲಿರುವ ತಮ್ಮ ಮನೆ, ಅಂಗಡಿಗಳ ಮುಂದೆ ನಿಂತು ಶ್ರೀ ದೇವರಿಗೆ ಆರತಿ, ಹಣ್ಣು ಕಾಯಿ ಸಲ್ಲಿಸುವ ಮೂಲಕ ಪೇಟೆ ಸವಾರಿಯಲ್ಲಿ ಸಂಖ್ಯಾ ಮಿತಿಗಿಂತ ಹೆಚ್ಚು ಮಂದಿ ಭಾಗವಹಿಸದಂತೆ ವಿನಂತಿಸಲಾಗಿದೆ.