ನಾನು ಭಾರತೀಯಳು ಎನ್ನುದಕ್ಕೆ ನಾಚಿಕೆಯಾಗುತ್ತಿದೆ ಎಂದ ಪ್ರತಿಭಾ ಕುಳಾಯಿಗೆ ಸಮಾಜಿಕ ಜಾಲತಾಣಗಳಲ್ಲಿ ಚಳಿಬಿಡಿಸಿದ ಹಿಂದೂಪರ ಸಂಘಟನೆಗಳು – ಕಹಳೆ ನ್ಯೂಸ್
ಮಂಗಳೂರು: ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ನಾನು ಭಾರತೀಯಳು ಎನ್ನುವುದಕ್ಕೆ ನಾಚಿಕೆಯಾಗುತ್ತಿದೆ. ಕಥುವಾದಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಆ ಬಾಲಕಿಯ ಹೆಸರನ್ನು ತನ್ನ ಮಗಳು ಪೃಥ್ವಿ ಹೆಸರಿನ ಜತೆ ಸೇರಿಸಿ ಕರೆಯುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಹೇಳಿಕೆ ನೀಡಿದ್ದಾರೆ.
ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಭಾರತೀಯಳು ಎನ್ನುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಹೇಳಿರುವುದಕ್ಕೆ ನನ್ನ ವಿರುದ್ಧ ಬಿಜೆಪಿಯ ಹಿಂದೂಗಳೆನಿಸಿಕೊಂಡವರು ಪ್ರತಿಭಟನೆ ಮಾಡಬಹುದು. ಕಾರು, ಮನೆಗೆ ಕಲ್ಲು ತೂರಾಟವೂ ನಡೆಯಬಹುದು ಎಂದರು.
ದ.ಕ.ದಲ್ಲೂ ನಿರಂತರ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪಬ್ ದಾಳಿ, ಹೋಂಸ್ಟೇ ದಾಳಿ ಹೆಸರಿನಲ್ಲಿ ಬಿಜೆಪಿಯ ಹಿಂದೂಗಳು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಾನು ಹಿಂದೂವಾಗಿದ್ದರೂ ಬಿಜೆಪಿಯ ಹಿಂದೂಗಳೆದುರು ಹಿಂದೂ ಎನ್ನಲು ನಾಚಿಕೆಯಾಗುತ್ತಿದೆ ಎಂದರು.
ನನ್ನ ಮೇಲೂ ಹಲ್ಲೆ ನಡೆದಿತ್ತು
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಡಿಕೆರೆ ಪರಿಸರದಲ್ಲಿ ನಾನು ಪ್ರಚಾರಕ್ಕೆ ಹೋದ ಸಂದರ್ಭ ಅಲ್ಲಿನ ಕೆಲವು ಬಿಜೆಪಿಯ ಹಿಂದೂಗಳು ತಡೆದು,ಹಲ್ಲೆ ನಡೆಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿದೆ. ನನ್ನ ಮನೆಯ ಬಳಿ ಬಂದು ಬೆದರಿಕೆಯನ್ನೂ ಒಡ್ಡಿದ್ದಾರೆ. ಅದರ ವೀಡಿಯೋ ನನ್ನ ಬಳಿ ಇದೆ ಎಂದು ಕೆಲವು ವೀಡಿಯೋಗಳನ್ನು ಪ್ರದರ್ಶಿಸಿದರು.
ಬಿಜೆಪಿಯ ಹಿಂದೂಗಳು ನನ್ನ ಜತೆ ಅನೇಕ ಬಾರಿ ಅಶ್ಲೀಲವಾಗಿ ವರ್ತಿಸಿದ್ದಾರೆ. ಈ ಕುರಿತು ಹಲವು ದೂರುಗಳನ್ನು ನೀಡಲಾಗಿದೆ. ಬೇಟಿ ಬಚಾವೊ ಎಂದು ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದ್ದರೂ ಕಳೆದ 5 ವರ್ಷಗಳಲ್ಲಿ ಹೆಚ್ಚಿನ ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆದಿವೆ. ತಮ್ಮ ಕುಟುಂಬದ ಮಹಿಳೆಯರ ಜತೆ ಜೀವಿಸದ ಮೋದಿ, ಯೋಗಿ ಅವರಿಗೆ ಮಹಿಳೆಯರ ನೋವು ಅರ್ಥವಾಗುವುದಿಲ್ಲ ಎಂದರು.
ಕಥುವಾ ಬಾಲಕಿಯ ಹೆಸರು, ಭಾವಚಿತ್ರ ಬಳಸದಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಪ್ರತಿಭಾ ನಾನು ಯಾಕೆ ಹೆಸರು ಬಳಸಬಾರದು ಎಂದು ಪದೇ ಪದೇ ಬಾಲಕಿಯ ಹೆಸರನ್ನು ಬಳಸಿದರು. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ. ಈ ಕುರಿತು ನನ್ನ ವಿರುದ್ಧ ಯಾರಾದರೂ ದೂರು ನೀಡಿದರೆ ನೀಡಲಿ ಎಂದು ತಿಳಿಸಿದರು. ಜತೆಗೆ ತನ್ನ ಮಗಳು ಪೃಥ್ವಿಯನ್ನೂ ಪತ್ರಿಕಾಗೋಷ್ಠಿಯಲ್ಲಿ ಕೂರಿಸಿದ್ದರು.
ಪ್ರತಿಭಾ ಕುಳಾಯಿಗೆ ಸಮಾಜಿಕ ಜಾಲತಾಣಗಳಲ್ಲಿ ಚಳಿಬಿಡಿಸಿದ ಹಿಂದೂಪರ ಸಂಘಟನೆಯ ಯುವಕರು :
ಈ ಹೇಳಿಕೆಯಿಂದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ. ಪ್ರತಿಭಾ ಕುಳಾಯಿ ಭಾರತಬಿಟ್ಟು ತೊಲಗಿ ಎಂದು ಆಕ್ರೋಶದ ಫೋಸ್ಟ್ ಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಲತಾ ಸಾಲ್ಯಾನ್, ಜೆಸಿಂತಾ ಡಿ’ಸೋಜಾ, ಶಕುಂತಳಾ ಕಾಮತ್ ಉಪಸ್ಥಿತರಿದ್ದರು.