ಲೇಖನ : ಶ್ರದ್ಧಾಕೇಶವ ರಾಮಕುಂಜ
ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರಿಯ ಕಲೆ. ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿ ನಿಂತ ಒಂದು ಸಮ್ಮಿಶ್ರ ಗಂಡು ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ ನೃತ್ಯ ಮತ್ತು ಚಿತ್ರ ಈ ನಾಲ್ಕು ಕಲೆಗಳ ಔಚಿತ್ಯ ಪೂರ್ಣವಾದ ಸಾಮರಸ್ಯವಿದೆ ಇಂತಹ ಯಕ್ಷಗಾನದಲ್ಲಿ ಸಾಧನೆಗೈದ ನಮ್ಮೂರಿನ ಓರ್ವರನ್ನು ನಾನಿಲ್ಲಿ ಪರಿಚಯಿಸಲು ಹೆಮ್ಮೆಯೆನಿಸುತ್ತಿದೆ.
ಕೂಟೇಲು ಮನೆತನದ ಹಿರೇಬಂಡಾಡಿ ಗ್ರಾಮದ ಕೊರಂಬಾಡಿಯ ಚೆನ್ನಪ್ಪ ಗೌಡ ಹಾಗೂ ಹೊನ್ನಮ್ಮ ದಂಪತಿಗಳ ಸುಪುತ್ರರಾದ ಶೇಕರ ಕೊರಂಬಾಡಿ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ ಹಿರೇಬಂಡಾಡಿಯಲ್ಲಿ ಪೂರೈಸಿ ನಂತರ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಶಿಕ್ಷಣ ಪಡೆದ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತಾ ಒಲವು ಮೂಡಿಸಿಕೊಂಡು ಶ್ರೀ ಅಂಬಾಪ್ರಸಾದ್ ಪಾತಾಳ ಮತ್ತು ಧರ್ಮಸ್ಥಳ ಯಕ್ಷಗಾನ ತರಭೇತಿ ಕೇಂದ್ರದಲ್ಲಿ ಶ್ರೀ ತಾರಾನಾಥ ಬಲ್ಯಾಯ ವರ್ಕಾಡಿಯವರ ಗರಡಿಯಲ್ಲಿ ಪಳಗಿ ತೆಂಕು ತಿಟ್ಟಿನ ಗಜಮೇಳವಾದ ಕಟೀಲು ಮೇಲಕ್ಕೆ ಸೇರ್ಪಡೆಗೊಂಡರು. ಬಡಗು ತಿಟ್ಟಿನ ಮಂದಾರ್ತಿ ಮೇಳದಲ್ಲೂ ಗುರುಗಳಾದ ರಮೇಶ್ ಗಾಣಿಗ ಹಾರಾಡಿ ಅವರ ಗರಡಿಯಲ್ಲಿ 2ವರ್ಷ ಸೇವೆ ಸಲ್ಲಿಸಿರುತ್ತಾರೆ.
ಒಟ್ಟಾರೆ 12 ವರುಷ ಯಕ್ಷಗಾನದಲ್ಲಿ ಅನುಭವವಿರುವ ಇವರು ಪ್ರಸ್ತುತ ಕಟೀಲು 1ನೇ ಮೇಳದಲ್ಲಿ ದೇವಿಯ ಪ್ರಧಾನ ಪಾತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ತ್ರೀ ವೇಷ, ಪುಂಡು ವೇಷ, ಕಿರೀಟ ವೇಷದಲ್ಲಿ ಮಿಂಚಿರುವ ಇವರು ತಮ್ಮ ನೆಚ್ಚಿನ ವೇಷಗಳಾದ ಯಶೋಮತಿ, ಶ್ರಿದೇವಿ, ಸೀತೆ, ತಾರಾಮಣಿ, ಸುಭದ್ರೆ, ಮೀನಾಕ್ಷಿ ಹೀಗೆ ಹಲಾವಾರು ಅವಕಾಶಗಳು ಒದಗಿ ಬಂದಾಗ ತನ್ನ ಪಾಲಿಗೆ ಬಂದ ಎಲ್ಲಾ ಪಾತ್ರಗಳನ್ನು ಇಷ್ಟಪಟ್ಟು ಆತ್ಮವಿಶ್ವಾಸದಿಂದ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಇವರ ನೆಚ್ಚಿನ ಪ್ರಸಂಗಗಳು ಮಾನಿಷಾದ ಶ್ರೀದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಚೂಡಾಮಣಿ ದಕ್ಷಯಜ್ಞ, ಸತ್ಯಹರಿಶ್ಚಂದ್ರ, ಶ್ರೀನಿವಾಸ ಕಲ್ಯಾಣ ಇತ್ಯಾದಿ. ಯಕ್ಷಗಾನವು ಇವರಿಗೆ ಆರೋಗ್ಯಕರ ಮಾನಸಿಕ ನೆಮ್ಮದಿಯನ್ನು ತಂದುಕೊಟ್ಟಿದೆ. ಯಕ್ಷಗಾನ ಕಲೆಯನ್ನು ಪ್ರತ್ಯಕ್ಷ ಕಲಾಮಾತೆ ಎಂದೇ ಆರಾಧಿಸಿಕೊಂಡು ಬಂದಿದ್ದಾರೆ.
ಕಲಾವಿದನಿಗೆ ಪೂರ್ವ ತಯಾರಿಯು ಬಹಳ ಪ್ರಾಮುಖ್ಯ ಕಲಿತು ಪೂರ್ಣ ಆಯಿತು ಅಂತ ಹೇಳೋ ಹಾಗಿಲ್ಲ, “ನಾನು ಕಲಿತದ್ದು ಏನೂ ಅಲ್ಲ, ಕಲಿಯಬೇಕಾದ್ದು ತುಂಬಾ ಇದೆ” ಇನ್ನಷ್ಟು ಹೆಚ್ಚಿನ ಅಧ್ಯಯನ ಮಾಡಬೇಕು ಅನ್ನುವ ಇವರು ರಂಗಕ್ಕೆ ಹೋಗುವ ಮುನ್ನ ಪ್ರಧಾನ ಭಾಗವತರಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಮಾಹಿತಿ ಪಡೆದು, ಮತ್ತೆ ಹಿರಿಯ ಕಲಾವಿದರಲ್ಲಿ ಮಾತುಕತೆ ನಡೆಸಿ ಮತ್ತಷ್ಟು ತಯಾರಿಯನ್ನು ಮಾಡಿ ವೇಷದಲ್ಲಿ ಅಚ್ಚುಕಟ್ಟುತನ ಕಾಣುತ್ತಾರೆ.
ಏತನ್ಮದ್ಯೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ ಇವರು ಕಡಲಾಚೆಗೂ ಯಕ್ಷ ಮಿತ್ರರು ದುಬೈ ಈ ತಂಡದೊಂದಿಗೆ ಯಕ್ಷಗಾನದ ಸವಿರುಚಿಯನ್ನ ಉಣಬಡಿಸಿ ಅದೆಷ್ಟೋ ಕಲಾಭಿಮಾನಿಗಳನ್ನು ಗಳಿಸಿದ್ದಾರೆ.
ಜೆ ಸಿ ಐ ನೆಕ್ಕಿಲಾಡಿ, ಯಕ್ಷ ಧ್ರುವ ಪಟ್ಲ ಫಾಂಡೇಷನ್ ರಿ. ಉಪ್ಪಿನಂಗಡಿ ಇವರ ಜಂಟಿ ಆಶ್ರಯದಲ್ಲಿ ನಡೆದ ಯಕ್ಷಗಾನ ನಾಟ್ಯ ತರಬೇತಿ ಸಪ್ತಾಹದಲ್ಲಿ ಇವರ ಸೇವೆಗೆ ನಾಟ್ಯಗುರು ಆಗಿ ಅಭಿನಂದನಾ ಪತ್ರ ನೀಡಿರುತ್ತಾರೆ. ಭೂಲೋಕ ನಿತ್ಯ ನೂತನವಾದುದು. ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಿದೆ ಹಾಗೆಯೇ ಯಕ್ಷಗಾನ ಕಲೆಯು ಉಳಿಯಬೇಕು ಮತ್ತು ಬೆಳೆಯಬೇಕು. ಇದಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯ ಇದು ಜನಸಾಮಾನ್ಯರಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ತಮ್ಮ ಜೀವನದಲ್ಲಿ ಸದಾ ಪ್ರೋತ್ಸಾಹ ನೀಡುತ್ತಿರುವ ಧರ್ಮಪತ್ನಿ ಸುಮಲತಾ ಹಾಗೂ ಮಕ್ಕಳಾದ ಪೂಜಾಶ್ರೀ ಮತ್ತು ಪ್ರಥ್ವಿಕ್ ಇವರೊಂದಿಗೆ ಪೆರಿಯಡ್ಕದಲ್ಲಿ ನೆಲೆಸಿರುವ ಇವರಿಗೆ ಕಟೀಲು ಶ್ರೀ ಅಮ್ಮನವರು ಐಶ್ವರ್ಯ ನೆಮ್ಮದಿ ನೀಡಲೆಂದು ಶ್ರದ್ಧಾಕೇಶವ ಪ್ರಾರ್ಥಿಸುತ್ತೇನೆ.