ಬೆಳ್ತಂಗಡಿಯ ಲಾಯಿಲದಲ್ಲಿ ಮನೆ ಬಿಟ್ಟು ಬರಲು ಒಪ್ಪದ ಪ್ರೇಯಸಿ ; ಮನೆಗೆ ನುಗ್ಗಿ ಪ್ರೇಯಸಿಗೆ ಚೂರಿಯಿಂದ ಇರಿದ 22 ವರ್ಷದ ಯುವಕ-ಕಹಳೆ ನ್ಯೂಸ್
ಬೆಳ್ತಂಗಡಿ : ಬೆಳ್ತಂಗಡಿಯ ಲಾಯಿಲ ಸಮೀಪ ಏ.6ರಂದು ಮಂಗಳವಾರ ರಾತ್ರಿ ಮದುವೆಯಾಗಲು ಮನೆ ಬಿಟ್ಟು ಬರಲು ಒಪ್ಪದ ಪ್ರೇಯಸಿಯ ಮನೆಗೆ ನುಗ್ಗಿದ ಯುವಕನೋರ್ವ ಸಿಟ್ಟಿಗೆದ್ದು ಆಕೆಗೆ ಚೂರಿ ಇರಿದ ಘಟನೆ ನಡೆದಿದೆ.
ಚೂರಿ ಇರಿದ ಯುವಕ ಪುಂಜಾಲಕಟ್ಟೆಯ ನಿವಾಸಿ 22ವರ್ಷದ ಶಮೀರ್ ಎಂದು ತಿಳಿದುಬಂದಿದೆ. ಈತ ತನ್ನದೇ ಸಮುದಾಯದ ಲಾಯಿಲ ಗ್ರಾಮದ ನಿವಾಸಿ 21 ವರ್ಷದ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗಲು ಮನೆಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಆದರೆ ಯುವತಿ ಅದನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಮಂಗಳವಾರ ರಾತ್ರಿ 10.20ಕ್ಕೆ ಯುವತಿ ಮನೆಗೆ ನುಗ್ಗಿ ಆಕೆಗೆ ಚೂರಿ ಇರಿದಿದ್ದಾನೆ. ಯುವತಿಯ ಎಡಕೈ, ಬಲಕೈ , ಹಾಗೂ ಕುತ್ತಿಗೆಗೆ ಗಾಯವಾಗಿದ್ದು, ತಕ್ಷಣ ಮನೆಮಂದಿ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಕಲಂ 448,324,354,504,506 ಐಪಿಸಿಯಡಿ ಪ್ರಕರಣ ದಾಖಲಾಗಿದೆ.