ಬೆಳ್ತಂಗಡಿ ಇಲ್ಲಿನ ಹೊಸಂಗಡಿ ವ್ಯಾಪ್ತಿಯಲ್ಲಿ ಗಾಳಿ-ಗುಡುಗು ಸಹಿತ ಭಾರಿ ಮಳೆ ; ಅಪಾರ ಪ್ರಮಾಣದ ಹಾನಿ-ಕಹಳೆ ನ್ಯೂಸ್
ಬೆಳ್ತಂಗಡಿ : ಬೆಳ್ತಂಗಡಿ ಇಲ್ಲಿನ ಹೊಸಂಗಡಿ ಹಾಗೂ ಕಾಶಿಪಟ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಪೆರಾಡಿ ವ್ಯಾಪ್ತಿಯಲ್ಲಿ ಬುಧವಾರ ಸಾಯಂಕಾಲ ಗಾಳಿ-ಗುಡುಗು ಸಹಿತ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಕಾಶಿಪಟ್ಣ ಗ್ರಾಮದಲ್ಲಿ 30ಕ್ಕಿಂತ ಅಧಿಕ ಮನೆಯ ತೋಟಗಳಿಗೆ ಹಾನಿಯಾಗಿದ್ದು, ಎರಡು ಟ್ರಾನ್ಸ್‍ಫಾರ್ಮರ್ ಸೇರಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಮೆಸ್ಕಾಂ ಗೆ ಅಪಾರ ನಷ್ಟ ಸಂಭವಿಸಿದೆ. ಸುಮಾರು 20ಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿದೆ. ಕಾಶಿಪಟ್ಣ ಮಸೀದಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನು ಚರಂಡಿ ಕಡೆಗೆ ತಿರುಗಿಸಿದ್ದು, ಸಂಭವನೀಯ ಅನಾಹುತ ತಪ್ಪಿದೆ. ಒಂದು ಗಂಟೆ ಕಾಲ ಸುರಿದ ಭೀಕರ ಗಾಳಿ, ಮಳೆಯಿಂದ ಜನ ಭಯಭೀತರಾಗುವ ವಾತಾವರಣ ನಿರ್ಮಾಣವಾಯಿತು. ಹೊಸಂಗಡಿ ಗ್ರಾಮದ ಸುಮಾರು 10ಕ್ಕೂ ಅಧಿಕ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಹಲವು ಮನೆಗಳ ಹಾಗೂ ಕೊಟ್ಟಿಗೆಯ ಹೆಂಚು, ಸಿಮೆಂಟ್ ಶೀಟುಗಳು ಹಾರಿಹೋಗಿವೆ. ಬಡಕೋಡಿ ಗ್ರಾಮದ ರಾಘವೇಂದ್ರ ನಾಯ್ಕ ಎಂಬುವರ ಮನೆಯ ಮಾಡು ಹಾರಿ ಪಕ್ಕಕ್ಕೆ ಬಿದ್ದಿದ್ದು, ಕೀರ್ತಿ ಜೈನ್ ಎಂಬುವರ ಮನೆಯ ಮಾಡು ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದು ವಾಹನಗಳು ಜಖಂ ಆಗಿವೆ. ಉಳಿದಂತೆ ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಉರಿ ಸೆಕೆ ಹಾಗೂ ಬಿಸಿಲು ಹೆಚ್ಚಾಗಿತ್ತು.