ಸುಳ್ಯ : ಎಪ್ರಿಲ್ 7ರಂದು ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ನೀರಿನ ದುರಸ್ತಿ ನಡೆಸುತ್ತಿದ್ದ ವ್ಯಕ್ತಿಯೋರ್ವ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಕಲ್ಮಕಾರು ಗ್ರಾಮದ ಮೆಂಟಕಜೆ ನಿವಾಸಿ 85 ವರ್ಷದ ಕೃಷಿಕ ಶಿವರಾಮ ಗೌಡ ಎಂದು ಗುರುತಿಸಲಾಗಿದೆ. ಶಿವರಾಮ ಗೌಡ ಅವರು ಎಪ್ರಿಲ್ 7ರ ಬುಧವಾರದಂದು ಮನೆಯ ಸಮೀಪದ ಕಾಡಿನಿಂದ ತೋಟಕ್ಕೆ ಬರುವ ನೀರಿನ ಪೈಪ್ ಅನ್ನು ಸರಿಪಡಿಸಲು ತೆರಳಿದ್ದ ಸಂದರ್ಭದಲ್ಲಿ ಇವರ ಮೇಲೆ ಕಾಡಾನೆ ದಾಳಿ ಮಾಡಿದೆ. ಇದರ ಪರಿಣಾಮ ಶಿವರಾಮ ಗೌಡರು ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ. ಅವರು ಮನೆಗೆ ವಾಪಾಸ್ಸಾಗದ ಕಾರಣ ಮನೆಮಂದಿ ಸ್ಥಳಕ್ಕೆ ತೆರಳಿದ್ದ ಸಂದರ್ಭದಲದಲಿ ಈ ಘಟನೆ ತಿಳಿದುಬಂದಿದೆ. ಕೂಡಲೇ ಅವರನ್ನು ಆಂಬುಲೆನ್ಸ್‍ನಲ್ಲಿ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಹಾಗೂ ಮೃತರು ಪತ್ನಿ, ಮೂವರು ಪುತ್ರರು ಮತ್ತು ಪುತ್ರಿಯರನ್ನು ಅಗಲಿದ್ದಾರೆ. ಏತನ್ಮಧ್ಯೆ, ಬುಧವಾರದಂದು ಸಂಜೆ ಎಂಟು ಆನೆಗಳಿರುವ ಹಿಂಡು ಸುಬ್ರಹ್ಮಣ್ಯದಿಂದ ಐನೆಕಿದು, ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಮುಂತಾದ ಭಾಗಕ್ಕೆ ಸಂಪರ್ಕಿಸುವ ಐನೆಕಿದು ರಸ್ತೆಯ ಕೆದಿಲ ಬಳಿ ಕಾಣಿಸಿಕೊಂಡಿವೆ. ಅರಣ್ಯಾಧಿಕಾರಿಗಳು ಈ ಘಟನೆಯ ಬಗ್ಗೆ ತಿಳಿದು ಬಳಿಕ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸುಬ್ರಹ್ಮಣ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.