ಜಮ್ಮು-ಕಾಶ್ಮೀರ : ಅಲ್ ಖೈದಾ ಉಗ್ರ ಸಂಘಟನೆಯ ಅಂಗಸಂಸ್ಥೆ ಅನ್ಸಾರ್ ಗಜ್ವತ್ ಉಲ್ ಹಿಂದ್ ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ದಕ್ಷಿಣ ಕಾಶ್ಮೀರದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾದ ಟ್ರಾಲ್ ಪ್ರದೇಶದಲ್ಲಿರುವ ತೋಟದೊಳಗಿನ ಅಡಗುತಾಣವೊಂದರಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಎಜಿಹೆಚ್ ಮುಖ್ಯಸ್ಥ ಇಮ್ತಿಯಾಜ್ ಷಾ ಮತ್ತು ಮತ್ತೊಬ್ಬ ಉಗ್ರನನ್ನು ಹಾಗೂ ಶೋಪಿಯಾನ್ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಕುರಿತು ಕಾಶ್ಮೀರ ವಲಯದ ಐಜಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದು, ಶೋಪಿಯಾನ್ ನಲ್ಲಿ ಹತ್ಯೆಯಾದ ಐದು ಉಗ್ರರಲ್ಲಿ ಇಬ್ಬರು ಹಿಜ್ಬುಲ್-ಉಲ್-ಮುಜಾಹಿದ್ದೀನ್ ಗೆ ಸೇರಿದವರು. ಮತ್ತು ಓರ್ವ ಲಷ್ಕರ್-ಎ-ತೋಯಿಬಾ ಹಾಗೂ ಇನ್ನೂ ಇಬ್ಬರು ಎಜಿಎಚ್ ಸಂಘಟನೆಗೆ ಸೇರಿದವರಾಗಿದ್ದಾರೆ. ಹಾಗೆಯೇ ಎನ್‍ಕೌಂಟರ್ ಸ್ಥಳದಿಂದ ಏಳು ಏಕೆ-47 ರೈಫಲ್ಸ್, 2 ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಯಾದ ಉಗ್ರರು 2019 ರಿಂದಲೂ ಉಗ್ರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಈ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.