Tuesday, January 21, 2025
ಹೆಚ್ಚಿನ ಸುದ್ದಿ

ದಿಲ್ಲಿಯಲ್ಲಿ ಕನ್ನಡ ಬಾವುಟ ಮೆರೆಸಿದ ಮೈಸೂರಿನ ಮಹನೀಯ ; ಎನ್.ಎಸ್.ವಾಮನ್-ಕಹಳೆ ನ್ಯೂಸ್

ಲೇಖನ : ಎನ್.ವ್ಹಿ. ರಮೇಶ್

ಮೈಸೂರಿನಲ್ಲಿ 24-11-1919ರಂದು ಹುಟ್ಟಿ, ಶಾಲಾ ದಿನಗಳಲ್ಲೇ 12ನೇ ವರ್ಷದಲ್ಲಿ ರಂಗಭೂಮಿ ಪ್ರವೇಶಿಸಿ, 1944ರಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ಸ್ಟೂಡೆಂಟ್ಸ್ ಡ್ರಾಮಾಟಿಕ್ಸ್ ಅಸೋಸಿಯೇಶನ್ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಕೊಟ್ಟು, 1936ರಿಂದ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಪ್ರೊ. ಎಂ.ವಿ.ಗೋಪಾಲಸ್ವಾಮಿ ಅವರ ಟಾಯ್ ಟ್ರಾನ್ಸ್‍ಮೀಟರ್ ಮನೆ ಸ್ಟುಡಿಯೋದ, ಬಾನುಲಿ ಪ್ರಸಾರದ ಹವ್ಯಾಸಿ ನಾಟಕ ಕಲಾವಿದರಾಗಿ, 1944ರಿಂದ 1979ರವರೆಗೆ ಆಕಾಶವಾಣಿಯ ನಾಟಕ ಕಲಾವಿದ ಹಾಗೂ ನಿರ್ದೇಶಕರಾಗಿ, ನಭೂತೋ ನಭವಿಷ್ಯತಿ ಎಂಬಂತೆ ಮಿನುಗಿದವರು ಎನ್.ಎಸ್.ವಾಮನ್.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

1952ರಿಂದ 1955ರವರೆಗೆ, ದಿಲ್ಲಿಯ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿದ್ದಾಗ, ದಿಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, 1954ರಲ್ಲಿ ಅಂದಿನ ರಾಷ್ಟ್ರಪತಿ ಡಾ. ಬಾಬುರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಉತ್ಸವ ಏರ್ಪಡಿಸಿ, ಉಪರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರಿಂದ ಕನ್ನಡ ಗ್ರಂಥಾಲಯ ಉದ್ಘಾಟನೆ ಮಾಡಿಸಿ, ನಾಲ್ಕು ಕನ್ನಡ ನಾಟಕಗಳನ್ನಾಡಿಸಿ, ದಿಲ್ಲಿಯಲ್ಲಿ ಕನ್ನಡದ ಧ್ವಜ ಹಾರಿಸಿದವರು ನಂಜನಗೂಡು ಶ್ರೀನಿವಾಸ ವಾಮನ್. ಬಿ.ಎಂ.ಶ್ರೀ. ಅವರ ಅಶ್ವತ್ಥಾಮನ್, ಜಿ.ಪಿ.ರಾಜರತ್ನಂ ಅವರ ಗಂಡುಗೊಡಲಿ, ಸಂಸ ಅವರ ವಿಗಡ ವಿಕ್ರಮರಾಯ ಹಾಗೂ ಏ.ಎನ್.ಮೂರ್ತಿರಾಯರ ಆಷಾಡಭೂತಿ, ನಿರ್ದೇಶಿಸಿ ಅಭಿನಯಿಸಿದರು. ಅಂದಿನ ನಾಟಕಗಳಲ್ಲಿ ಕೆ.ಎಸ್.ಅಶ್ವಥ್ ಮುಖ್ಯ ಪಾತ್ರಗಳಲ್ಲಿದ್ದರು. ಚಿತ್ರನಟ ಸಂಪತ್ ಅವರ ಸಹಕಾರದಿಂದ, ಮೈಸೂರು ಅರಮನೆಯಿಂದ, ದೆಹಲಿಯ ನಾಟಕಗಳಿಗಾಗಿ, ರಾಜಪೋಷಾಕುಗಳು, ಕತ್ತಿ ಗುರಾಣಿಗಳು ಇವುಗಳನ್ನು ತರಿಸಿಕೊಂಡಿದ್ದರು. ಈ ಕನ್ನಡ ಉತ್ಸವವದಲ್ಲಿ ಕರ್ನಾಟಕದ ಶಾಸ್ತ್ರೀಯ ಗಾಯನ, ಸಂಗೀತ ವಾದ್ಯವಾದನ, ದೇವರ ನಾಮ, ವಚನ ಹಾಗೂ ಜಾನಪದ ನೃತ್ಯಗಳನ್ನು ಅಲ್ಲಿ ಏರ್ಪಡಿಸಿದ್ದರು. ಇದೇ ಅವಧಿಯಲ್ಲಿ, ಮಿತ್ರ ಎಂ..ಶಂಕರ್‍ಸಿಂಗ್ ಅವರ ಸಹಕಾರದಿಂದ ಅವರ ನಿರ್ದೇಶನ-ನಿರ್ಮಾಣದ ದಲ್ಲಾಳಿ ಹಾಗೂ ವರದಕ್ಷಿಣೆ ಎಂಬ 2 ಕನ್ನಡ ಚಲನಚಿತ್ರಗಳ ಪ್ರತಿಗಳನ್ನು ತರಿಸಿ, ದಿಲ್ಲಿಯಲ್ಲಿ ಥಿಯೇಟರ್ ಇರದಿದ್ದಾಗ, ಡಿಫೆನ್ಸ್ ಕಾಲನಿಯ ಕೋಣೆಯಲ್ಲಿ ಪ್ರದರ್ಶಿಸಿ, 1 ರೂಪಾಯಿಗೆ ದಿಲ್ಲಿ ಕನ್ನಡಿಗರಿಗೆ ಮೊಟ್ಟ ಮೊದಲ ಬಾರಿ ಕನ್ನಡ ಚಲನಚಿತ್ರ ತೋರಿಸಿದ ಕೀರ್ತಿ ವಾಮನ್ ಅವರದು.

50ರ ದಶಕದಲ್ಲಿ, ಅಂದು ಕಲಾಜೀವನದ ಆರಂಭದಲ್ಲಿದ್ದ, ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳ ಭಾವೀ ಉಜ್ವಲ ತಾರೆಯರಾಗಲಿದ್ದ ಡಾ.ರಾಜಕುಮಾರ್ ಅವರಂತಹ ನೂರಾರು ಕಲಾವಿದರನ್ನು, ಆಕಾಶವಾಣಿ ಮೈಕಿನ ಮುಂದೆ ತಂದು, ಅವರಿಗೆ ರೇಡಿಯೋ ನಾಟಕ ಸಂಭಾಷಣೆ ಹೇಳುವ ಶೈಲಿಯನ್ನು ಕಲಿಸಿ ತರಬೇತಿಗೊಳಿಸಿದರು. ಇವರ ಪಟ್ಟ ಶಿಷ್ಯರಾದ ಕೆ.ಎಸ್.ಅಶ್ವಥ್ ಹಾಗೂ ಮಾಸ್ಟರ್ ಹಿರಣ್ಣಯ್ಯ, ವಾಮನ್ ಅವರೇ ಹುಡುಕಿ ತಂದು ಕಲಾಸಾಕ್ಷಾತ್ಕಾರ ಕೊಟ್ಟು, ತರಬೇತಿ ನೀಡಿ ಬೆಳಗಿಸಿದ ಅಮರ ನಕ್ಷತ್ರಗಳು. ಸಾಂಪ್ರದಾಯಿಕ, ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿ, ಅರಮನೆ ಸಂಸ್ಕøತ ವಿದ್ವಾಂಸರಾಗಿದ್ದ ತಾತಾ ವೆಂಕಟಾಚಲಶಾಸ್ತ್ರಿಗಳ ಸಂಸ್ಕøತಮಯ ಮನೆ ವಾತಾವರಣದಲ್ಲೂ, ಇವರ ಕನ್ನಡ ಭಾಷೆಯ ಮೇಲಿನ ಮಮತೆ ಅಪೂರ್ವ. ಇವರ ತಂದೆ ಶ್ರೀನಿವಾಸ ಅಯ್ಯರ್ ನಂಜನಗೂಡಿನಲ್ಲಿ ರಸಬಾಳೆ ಹಣ್ಣಿನ ತೋಟದಲ್ಲಿ ಕೃಷಿಕರಾಗಿದ್ದರು. ತಾಯಿ ತಂಗಮ್ಮ ಗೃಹಿಣಿ. ತಾತನ ಮನೆಯಲ್ಲಿ ಸುಬ್ಬರಾಯನ ಕೆರೆಯ ಕಾಲೇಜು ರಸ್ತೆಯ 144ನೇ ನಂಬರಿನ ಮನೆಯಲ್ಲಿ ವಾಸವಾಗಿದ್ದ ವಾಮನ್‍ಗೆ. ತನ್ನ 7 ಏಳು ತಲೆಮಾರಿನಲ್ಲಿ ಯಾರಿಗೂ ಇಲ್ಲದ ನಾಟಕದ ಹುಚ್ಚು. ಆಗ ನಾಟಕ ಕಲೆ ಅಬ್ಬಾ ಪೋಲಿಗಳಿಗೆ ಎಂಬ ಭಾವನೆ ಹೊಂದಿದ್ದ ತಾತ, ಇವರನ್ನು ಹೆದರಿಸಿ ಮಡಿಕೋಲಿನಿಂದ ಹೊಡೆದು ಕೋಣೆಯಲ್ಲಿ ಕೂಡಿ ಹಾಕಿದರೂ, ವಾಮನ್ ಕದ್ದು ಮುಚ್ಚಿ ಸತತ ನಾಟಕಗಳನ್ನು ನೋಡಿದರು. ಅಂದಿನಿಂದ ಕನ್ನಡ ನಾಡಿನ ಎಲ್ಲ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ದಿಗ್ಗಜಗಳೆಲ್ಲರೊಂದಿಗೆ ನಿಕಟ ಸಂಪರ್ಕ, ಇವರು ನೋಡದ ಅಂದಿನ ನಾಟಕವಿಲ್ಲ. ಇವರಿಗೆ ಆತ್ಮೀಯ ಪರಿಚಯವಿರದ ಕಂಪನಿ ಮಾಲೀಕರು, ಕಲಾವಿದರು, ಇರಲೇ ಇಲ್ಲ. 1940ರಲ್ಲಿ, ವಾಮನ್ ಮೈಸೂರಿನ ಮಹಾರಾಜ ಕಾಲೇಜು ಸೇರಿದರು. ಆ ನಾಲ್ಕು ವರ್ಷಗಳ ಅವಧಿಯಲ್ಲಿ, ವಿದ್ಯಾರ್ಥಿ ಸಂಘ ಹಾಗೂ ಇತರ ಸಾಂಸೃತಿಕ ಸಂಘಗಳ ಸಹಕಾರದೊಂದಿಗೆ, ಸುಮಾರು 26 ನಾಟಕಗಳನ್ನು ನಿರ್ದೇಶಿಸಿ, ಪಾತ್ರ ವಹಿಸಿ, ಅಂದಿನ ರಸಿಕ ವಿದ್ಯಾರ್ಥಿ, ಶಿಕ್ಷಕ, ಪಾಲಕರಿಗೆ, ನೂರಾರು ಪ್ರದರ್ಶನಗಳ ಮೂಲಕ, ಅಪಾರ ಸಂತಸ, ಕಲಾ ಪ್ರಜ್ಞೆ ನೀಡಿದರು.

1944ರಲ್ಲಿ ಮೈಸೂರಿನ ಹಾರ್ಡ್‍ವಿಕ್ ಪ್ರೌಢಶಾಲೆಯಲ್ಲಿ, ವಾಮನ್ ಶಿಕ್ಷಕರಾಗಿ, 5ವರ್ಷ, ವಿದ್ಯಾರ್ಥಿಗಳಿಗೆ ಪಾಠ ಕಲಿಸಿದರು, ತಮ್ಮ 25ನೇ ವಯಸ್ಸಿನಲ್ಲಿ 1944ರಲ್ಲಿ ಸ್ಟೂಡೆಂಟ್ಸ್ ಡ್ರಾಮಾಟಿಕ್ಸ್ ಅಸೋಸಿಯೇಶನ್ ಎಂಬ ವಿದ್ಯಾರ್ಥಿಗಳ ನಾಟಕ ಸಂಘ ಕಟ್ಟಿದರು. ಈ ಸಂಘದಲ್ಲಿಯೇ ಕೆ.ಎಸ್.ಅಶ್ವಥ್, ಮಾಸ್ಟರ್ ಹಿರಣ್ಣಯ್ಯ, ಎಚ್.ಪಿ.ಸರೋಜ ಮುಂತಾದವರು ತರಬೇತಿ ಪಡೆದು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಚದುರಂಗ, ಕುವೆಂಪು, ತ.ರಾ.ಸು ನಾಟಕಗಳನ್ನು ಸತತ ಆಡಿ ಜನಪ್ರಿಯಗೊಳಿಸಿದರು. ನಾ.ಕಸ್ತೂರಿ ಅವರ ಬೆಂಬಲದಿಂದ ಬಿಡುವಿನ ವೇಳೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಸಾಮಾಜಿಕ ಕ್ಯಾಂಪು ಮಾಡಿ ಊರಿನಲ್ಲಿ ಶ್ರಮದಾನ, ಅಕ್ಷರ ಕಾರ್ಯಕ್ರಮ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಹಾಗೂ ನಾಟಕ ಪ್ರದರ್ಶನ ಮಾಡಿದರು. ಆಕಾಶವಾಣಿಯಲ್ಲಿ ವಾಮನ್ ‘ತರಂಗರಂಗ’ ಎಂಬ ಬಾನುಲಿ ಪತ್ರಿಕೆಗೆ ಸಂಪಾದಕರಾಗಿ ಕೆಲಸ ಮಾಡಿದರು. ಡಾ.ರಾಜ್ ಹಲವಾರು ಬಾರಿ ಹೇಳಿರುವಂತೆ ‘ಕೋಲಂಬಸ್’ ನಾಟಕದಲ್ಲಿ ಡಾ.ರಾಜ್ ಹಾಗೂ ಅವರ ತಂಗಿ ಶಾರದಮ್ಮ ಅವರನ್ನು ಆಕಾಶವಾಣಿ ಮೈಕಿನ ಮುಂದೆ ಮೊಟ್ಟ ಮೊದಲ ಬಾರಿ ತಂದ ಕೀರ್ತಿ ವಾಮನ್ ಅವರದು. ಅದೇ ಸಮಯದಲ್ಲಿ ರಾತ್ರಿ ಕೆಂಪರಾಜ್ ಅರಸ್ ಅವರ ‘ಕೃಷ್ಣಲೀಲಾ’ ಚಲನಚಿತ್ರಕ್ಕೆ ಸಹಾಯಕರಾಗಿ, ನವಜ್ಯೋತಿ ಸ್ಟುಡಿಯೋದಲ್ಲಿ ಶೂಟಿಂಗ್‍ನಲ್ಲೂ ಸೇವೆ, ಮುಂದೆ ಮೈಸೂರು ಆಕಾಶವಾಣಿಯ ನಾಟಕ ವಿಭಾಗದ, ನಿರ್ಮಾಣದ ಜವಾಬ್ದಾರಿ, ವಾಮನ್ ಅವರ ಮೇಲೆ. ಹಿಂದೆ ಮೈಸೂರು ಆಕಾಶವಾಣಿ ಶಾರ್ಟ್‍ವೇವ್‍ನಲ್ಲಿ ಪ್ರಸಾರ ಮಾಡುತ್ತಿದ್ದ ಕಾಲದಲ್ಲಿ, ಬಾನುಲಿ ಮೂಲಕ, ನಾಟಕಗಳ ನಿರ್ದೇಶನ, ಅಭಿನಯಕ್ಕೆ ಹಾಗೂ ಹೊಸಬರು ಹಾಗೂ ನುರಿತ ಸಾಹಿತಿಗಳಿಂದ ಬಾನುಲಿ ನಾಟಕಗಳನ್ನು ಬರೆಯಿಸಿ, ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಅಂದಿನ ಇವರ ನಾಟಕಗಳು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ತನಕ, ಕನ್ನಡದ ಕಂಪು ಹರಡಿ, ಈ ನಾಟಕಗಳಿಗೆ ಅಲ್ಲಿಯ ಕನ್ನಡಿಗರೆಲ್ಲರ ಮೆಚ್ಚುಗೆ ಪಡೆದಿದ್ದರು.

ಕುವೆಂಪು ಅವರ ಬಳಿ ವಿವರಣೆ ಪಡೆದು, ಸಂದೇಹ ನಿವಾರಣೆ ಮಾಡಿಕೊಂಡು ಅವರ ಸಾಲು ಸಾಲು ಸರಳ ರಗಳೆ, ಗೀತ ನಾಟಕಗಳನ್ನು ನಿರ್ದೇಶಿಸಿದರು. ಆ ನಾಟಕಗಳಲ್ಲಿ ಕೆ.ಎಸ್.ಅಶ್ವಥ್, ಮಾಸ್ಟರ್ ಹಿರಣ್ಣಯ್ಯ, ಹೆಚ್.ಎಲ್.ನಾರಾಯಣರಾವ್ (ವಿಷ್ಣುವರ್ಧನ್ ತಂದೆ) ಹುಣಸೂರು ಕೃಷ್ಣಮೂರ್ತಿ, ಹೆಚ್.ಪಿ.ಸರೋಜಾ, ಎಂ.ನರೇಂದ್ರಬಾಬು ಮುಂತಾದ ಕಲಾವಿದರು ಉತ್ತಮ ಅವಕಾಶ, ತರಬೇತಿ ಪಡೆದರು. ಡಾ.ರಾಜ್ ಸ್ಮರಿಸಿಕೊಂಡ ಇನ್ನೊಂದು ನಾಟಕ ‘ನಂದಿನಿ’. ಅದರಲ್ಲಿ ಡಾ.ರಾಜ್ ಇತರರೊಂದಿಗೆ ನೇರ ಪ್ರಸಾರದಲ್ಲಿ ಅಭಿನಯಿಸುವಾಗ, ಇದ್ದಕ್ಕಿದ್ದಂತೆ ವಸಿಷ್ಠನ ಪಾತ್ರದ ಉಪೇಂದ್ರಾಚಾರ್ ಅವರಿಗೆ, ಗಾಬರಿಯಲ್ಲಿ ಮಾತು ಮರೆತೇ ಹೋಯ್ತು. ನೇರ ಪ್ರಸಾರದಲ್ಲಿ ನಾಟಕ ನಿಂತರೆ ದೇವರೇ ಗತಿ!. ಆಗ ನಿರ್ದೇಶಕ ಎನ್.ಎಸ್.ವಾಮನ್, ಯಾರಿಗೂ ಗೊತ್ತಾಗದಂತೆ, ಆ ಪಾತ್ರಧಾರಿ ಬಾಯಿಮುಚ್ಚಿ, ತಕ್ಷಣ ತಾವೇ ಆ ಪಾತ್ರದ ಸಂಭಾಷಣೆ ಹೇಳಿ ಅಭಿನಯಿಸಿದರು. ಇದು ಬೇರಾರಿಗೂ ಗೊತ್ತಾಗಲಿಲ್ಲ. ಆ ಸಮಯ ಪ್ರಜ್ಞೆ, ಚಾಣಾಕ್ಷತನ, ಜಾಣ್ಮೆ, ಕಲಾವಿದತನ ಮರೆಯಲಾಗದು. ಕೆ.ಎಸ್.ಅಶ್ವಥ್ ಅವರು ಆಗಾಗ ಎಲ್ಲೆಡೆ ಹೇಳಿದ್ದಂತೆ ಅವರಿಗೆ ನಾಟಕ ಕಲೆಯ ಹುಚ್ಚು ಹಿಡಿಸಿದ ಕಲಾಗುರು ಎನ್.ಎಸ್.ವಾಮನ್. ಹುಣಸೂರು ಕೃಷ್ಣಮೂರ್ತಿ, ತ.ರಾ.ಸು, ಅ.ನ.ಕೃ. ಹೆಚ್.ಕೆ.ಯೋಗಾನರಸಿಂಹ ಅವರಿಂದ ಸಾಲು ಸಾಲು ನಾಟಕಗಳನ್ನು ಬರೆಯಿಸಿ ನಿರ್ದೇಶಿಸಿದರು. ಒಂದು ಕಾಲದಲ್ಲಿ ಪ್ರತಿ ನಾಟಕಕ್ಕೆ ಅವರ 5 ರೂ. ಜತೆಗೆ, ಇತರರಿಂದ ಸಹ 5-5 ರೂ. ಕೊಡಿಸಿ. ಹುಣಸೂರು ಅವರನ್ನು ಪೋಷಿಸಿದರು. ಬಾಲಕೃಷ್ಣ, ನರಸಿಂಹರಾಜು, ರತ್ನಾಕರ, ಸೋರಟ್ ಅಶ್ವತ್ಥ್, ಇವರೆಲ್ಲ ಹೇಳುತ್ತಿದ್ದಂತೆ, ಅವರಿಗೆ ಆಕಾಶವಾಣಿ ನಾಟಕಗಳಲ್ಲಿ ಹಾಗೂ ಹೊರಗಡೆ ಅವಕಾಶ ನೀಡಿ, ನಿರ್ದೇಶಿಸಿ, ಪ್ರೋತ್ಸಾಹಿಸಿ ದುಡ್ಡು ಕೊಡಿಸಿದ ಅನ್ನದಾತ. ಜತೆಗೆ ಮನೆಯ ಅನ್ನಪೂರ್ಣೇಶ್ವರಿ, ಗಿರಿಜಾ ವಾಮನ್ ಅವರ ಕೈನ ರುಚಿ ಕಟ್ಟಾದ ಪೊಗದಸ್ತಾದ ತಿಂಡಿ ಊಟವನ್ನು, 1994ರಲ್ಲಿ ಬಾಲಕೃಷ್ಣ ಅಂತಿಮ ದಿನಗಳಲ್ಲೂ ಸ್ಮರಿಸಿದರು.

ಎನ್.ಎಸ್‍ವಾಮನ್ ಅವರಿಗೆ ಹಿಂದಿ ಚಲನಚಿತ್ರರಂಗದ ಬಲರಾಜ್ ಸಹಾನಿ, ಪೃಥ್ವಿರಾಜ್‍ಕಪೂರ್‍ರವರ ಸ್ನೇಹ. ಹೀಗಾಗಿ ಮೈಸೂರು ಆಕಾಶವಾಣಿಗೆ ಪೃಥ್ವಿರಾಜ್‍ಕಪೂರ್‍ರವರನ್ನು ಹಾಗೂ ಅವರ ತಂಡವನ್ನು ಕರೆತಂದು, “ಶಾಕುಂತಲಾ “ನಾಟಕವನ್ನು ಮೈಸೂರು ಬಾನುಲಿ ಕೇಂದ್ರದಿಂದ ಅಭಿನಯಿಸುವಂತೆ ಮಾಡುವಲ್ಲಿ, ಇವರ ಪ್ರಯತ್ನವೂ ಅವಸ್ಮರಣೀಯ. ನೇರ ಪ್ರಸಾರದಲ್ಲಿ ಸತತ ಮೂರು ಗಂಟೆ ಕಾಲ, ಒಂದು ಮದ್ಯಾಹ್ನ 2.30 ರಿಂದ ಈ ನಾಟಕ ಪ್ರಸಾರವಾದದ್ದು, ವಾಮನ್ ಅವರ ಜೀವನದ ಒಂದು ಮಹತ್ವದ ಕ್ಷಣ. ಗುಬ್ಬಿ ವೀರಣ್ಣ, ಬಿ.ಜಯಮ್ಮ, ಸ್ವರ್ಣಮ್ಮ ಮುಂತಾದ ಕಲಾವಿದರನ್ನು ಬಾನುಲಿಗೆ ನಾಟಕ ಹಾಗೂ ಸಂದರ್ಶನಗಳಿಗೆ ಎಳೆತಂದರು. ವಾಮನ್ಸ್ ಟ್ರೂಪ್ ಕಟ್ಟಿ, ನಾಡಿನಾದ್ಯಂತ ಕನ್ನಡ ನಾಟಕಗಳನ್ನು ಆಡಿ, ಆಡಿಸಿದರು. ಕ್ಷೀರಸಾಗರ, ಮಿತ್ರ ಪರ್ವತವಾಣಿ, ಎ.ಎನ್.ಮೂರ್ತಿರಾವ್ ಮುಂತಾದ ನಾಟಕಕಾರರ ನಾಟಕಗಳ ಸಹಸ್ರಾರು ಪ್ರಯೋಗಗಳನ್ನು ನಾಡಿನಾದ್ಯಂತ ಹಾಗೂ ದೆಹಲಿ, ಮದ್ರಾಸ್, ಮಧುರೈಗಳಲ್ಲೂ ಆಡಿದರು. ‘ಶಾಮಣ್ಣನ ಸಾಹಸ’ ‘ಸುಬ್ಬಾಶಾಸ್ತ್ರೀ’ ಹೆಚ್.ಎಲ್.ಎನ್.ಸಿಂಹ, ಅವರ ‘ಸಂಸಾರನೌಕ’ ಇವರ ಜನಪ್ರಿಯ ನಾಟಕಗಳು. ಆಷಾಢಭೂತಿಯಲ್ಲಿ ಅಶ್ವಥ್ – ಶಂಕರಪ್ಪ ಹಾಗೂ ವಾಮನ್ – ಸುಬ್ಬಾಶಾಸ್ತ್ರಿ, ಮುಂದೆ ಇದೇ ನಾಟಕ ಚಲನಚಿತ್ರವಾದಾಗ ಅಶ್ವಥ್ ಅದೇ ಪಾತ್ರವಹಿಸಿದರು.

ಮಹಮದ್ ಪೀರ್ ಸಾಹೇಬರು, ಬಿ.ಆರ್.ಪಂತುಲು ಅಮರಗೊಳಿಸಿದ ‘ಸಂಸಾರನೌಕ’ ವೃತ್ತಿ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲು. ಆ ನಾಟಕದ ಸುಂದರನ ಪಾತ್ರವನ್ನು ಎನ್.ಎಸ್.ವಾಮನ್, ಅಭಿನಯದಲ್ಲಿ ಮುಂದುವರೆಸಿ, ಅಮರ ಹಾಗೂ ಜನಪ್ರಿಯಗೊಳಿಸಿದರು. ಧಾರವಾಡದ ಬಾಸೆಲ್ ಮಿಷನ್ ಶಾಲೆಯ ‘ಟಾಗೋರ್ ಹಾಲ್’ ಈ ಸಂಸಾರ ನೌಕ ನಾಟಕದ ಬೆನಿಫಿಟ್ ಶೋಗಳಿಂದ ಕಟ್ಟಲಾಗಿದೆ. ಈ ಸಂದರ್ಭದಲ್ಲಿ ಇವರ ಮಗ ರಮೇಶ್ ಮಗುವಿನ ಪಾತ್ರ ವಹಿಸಿದ್ದರು. ದಿಲ್ಲಿ ಆಕಾಶವಾಣಿಯ ಕನ್ನಡ ವಾರ್ತಾ ಓದುಗ ಲಕ್ಷ್ಮಣ್‍ಜೋಶಿ, ಆಕಸ್ಮಿಕವಾಗಿ ಅಪಘಾತದಲ್ಲಿ ಮರಣ ಹೊಂದಿದಾಗ, ಹುಬ್ಬಳ್ಳಿ, ಧಾರವಾಡಗಳಲ್ಲಿ, ಅವರ ಕುಟುಂಬದ ನೆರವಿಗಾಗಿ ‘ಆಷಾಢಭೂತಿ’ ನಾಟಕದ ಬೆನಿಫಿಟ್ ಶೋಗಳು. ಇಲ್ಲಿ ಕೆ.ಎಸ್.ಅಶ್ವಥ್, ಎನ್.ಎಸ್.ವಾಮನ್ ಅವರೊಂದಿಗೆ ಅವರ ಹಿರಿಯ ಮಗ ಎನ್.ವ್ಹಿ.ರಮೇಶ್ ಸಹ ಅಭಿನಯಿಸಿದ್ದರು. ಎನ್.ಎಸ್.ವಿ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಬಡ ಕಲಾವಿದರು ಹಾಗೂ ಕನ್ನಡ ವೃತ್ತಿ ರಂಗಭೂಮಿ ಕಂಪನಿಗಳ ಏಳಿಗೆಗಾಗಿ, ಕಳಕಳಿಯ ಪ್ರಯತ್ನ ಮಾಡಿದರು. ವೃತ್ತಿ ರಂಗಭೂಮಿಯ ನೂರಾರು ನಾಟಕಗಳನ್ನು ಬಾನುಲಿಗೆ ಅಳವಡಿಸಿ, ಜನಪ್ರಿಯತೆ ಗಳಿಸಿದರಲ್ಲದೆ, ವೃತ್ತಿ ರಂಗಭೂಮಿಯ ನಾಟಕಗಳಿಗೆ, ಕಲಾವಿದರಿಗೆ, ಜನಪ್ರಿಯ ಬೇಡಿಕೆ ತಂದುಕೊಟ್ಟರು.

ಬಿಡುವಿನ ವೇಳೆಯಲ್ಲಿ ಕನ್ನಡ ಚಲನಚಿತ್ರ ಕಲಾವಿದರು, ನಾಡಿನಾದ್ಯಂತ ಕ್ಯಾಂಪ್ ಹೂಡಿರುವ ಕಂಪನಿ ನಾಟಕಗಳಲ್ಲಿ ಅಭಿನಯಿಸುವಂತೆ ಮಾಡಿ, ವೃತ್ತಿ ರಂಗಭೂಮಿಗೆ ಹಾಗೂ ಕಲಾವಿದರಿಗೆ, ಹೆಚ್ಚು, ಸಂಪಾದನೆ ಹಾಗೂ ರಸಿಕರಿಗೆ ಚಿತ್ರಕಲಾವಿದರ ಭೇಟಿ, ಈ ಉದ್ದೇಶಗಳನ್ನು ಸಫಲ ಗೊಳಿಸಿದರು. ಉದಯಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ ಅಯ್ಯರ್, ಶ್ರೀನಾಥ್, ಗಂಗಾಧರ್, ಕಲಾ, ಶೈಲಶ್ರೀ, ಪಿ.ಬಿ.ಶ್ರೀನಿವಾಸ್, ಆರ್.ಎನ್. ಜಯಗೋಪಾಲ್, ಕಲ್ಪನಾ, ಹರಿಣಿ, ವಾದಿರಾಜ್ ಹಾಗೂ ಬಹು ಹಿಂದೆ ಬಿ.ಸರೋಜದೇವಿ ಅವರನ್ನು ಬಾನುಲಿ ನಾಟಕಗಳಿಗೆ ಹಾಗೂ ಸಂದರ್ಶನಕ್ಕೆ ಕರೆತಂದರು. ಬಿ.ಅರ್.ಪಂತುಲು, ಎಸ್.ಆರ್.ಪುಟ್ಟಣ್ಣ ಕಣಗಾಲ್, ಎನ್.ಲಕ್ಷ್ಮೀನಾರಾಯಣ, ಗಿರೀಶ್ ಕಾರ್ನಾಡ್, ಎಂ.ಶಂಕರಪ್ಪ ಅವರ ಚಲನಚಿತ್ರಗಳಿಗೆ, ಸ್ಥಳೀಯ ಕಲಾವಿದರು, ಸ್ಥಳಗಳನ್ನು ಸೂಚಿಸಿ, ಧಾರವಾಡದ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಪರವಾನಿಗೆ ಕೊಡಿಸುವುದು, ಕನ್ನಡದ ಸಾಹಿತಿಗಳು, ಕಾದಂಬರಿಕಾರರ ಕೃತಿಗಳನ್ನು ಚಲನಚಿತ್ರಕ್ಕೆ ಅಳವಡಿಸಲು, ಅವರ ಒಪ್ಪಿಗೆಗಾಗಿ ಚಿತ್ರ ತಂಡವನ್ನು ಅವರಿಗೆ ಭೇಟಿ ಮಾಡಿಸುವುದು ಮುಂತಾದ ಸಹಕಾರ ನೀಡಿದರು. ಚಕ್ರತೀರ್ಥ, ತಬ್ಬಲಿಯು ನೀನಾದೆ ಮಗನೆ ಚಿತ್ರಗಳಿಗಾಗಿ ಕೆಲವು ಗೀತೆಗಳಿಗೆ ಜಾನಪದ ದಾಟಿಯ ಪರಿಶೀಲನೆ, ಸ್ಥಳೀಯ ಹಾಡುಗಾರರಿಂದ ವಾಮನ್ ಮನೆಯಲ್ಲಿ. ಮಾಡಿ ಮಡಿದವರು ಚಿತ್ರಕ್ಕಾಗಿ ರಾಮಗೋಪಾಲ (ಕೋದಂಡರಾಮ), ಎ.ಜಿ.ನೀಲಗಾರ, ಜಿ.ವಿ.ಹಿರೇಮಠ – ವಾಮನ್ ಅವರ ಶೋಧ ಹಾಗೂ ಕೊಡುಗೆ. ಕವಿರತ್ನ ಕಾಳಿದಾಸ, ರಂಗನಾಯಕಿ, ನಮ್ಮ ಮಕ್ಕಳು, ಕ್ರಾಂತಿಯೋಗಿ ಬಸವಣ್ಣ ಮುಂತಾದ 13 ಚಲನಚಿತ್ರಗಳಲ್ಲಿ ವಾಮನ್ ಅಭಿನಯಿಸಿದ್ದಾರೆ.