ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರ 60ನೇ ವರ್ಷದ ಜನ್ಮ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ವಿವಿಧ ತಾಲೂಕುಗಳಲ್ಲಿ ಆಚರಿಸುವುದೆಂದು ನಿಶ್ಚಯಿಸಲಾಯಿತು.
ಕಾರ್ಯಕ್ರಮವು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ಸಮಾಜಕ್ಕೆ ಸಂದೇಶವನ್ನು ನೀಡುವ ಕಾರ್ಯಕ್ರಮವೇ ಆಗೆಬೇಕೆಂದು ಮೂಲ ಉದ್ದೇಶವಾಗಿದೆ. ಅದರಂತೆ ಕಲ್ಲಡ್ಕ ಸುತ್ತ ಮುತ್ತಲಿನ ಗ್ರಾಮಗಳು ಸೇರಿದಂತೆ ಕಲ್ಲಡ್ಕ ವಲಯದ ಸರಣಿ ಕಾರ್ಯಕ್ರಮವನ್ನು ಅಮ್ಟೂರು ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಮನೋಜ್ ಕಟ್ಟೆಮಾರ್, ಮಂತ್ರದೇವತಾ ಸಾನಿಧ್ಯ ಕಟ್ಟೆಮಾರ್, ಅಮ್ಟೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ನಿಮಿತ್ತ ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ಅಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಲ್ಲಡ್ಕ ವಲಯದ ವಿವಿಧ ಗ್ರಾಮಗಳ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಭಜನೆಯ ಪ್ರಾರಂಭವನ್ನು ಅನಂತರಾಮ ಐತಾಳ್ ಓಣಿಬೈಲು ಇವರು ನಡೆಸಿಕೊಟ್ಟರು. ಸಂಜೆ ಸಮಾರೋಪದಲ್ಲಿ ಪೂಜ್ಯ ಸಾಧ್ವಿ ಮಾತಾನಂದಮಯಿಯವರು ಉಪಸ್ಥಿತರಿದ್ದು ಹನುಮಾನ್ ಚಾಲಿಸ್ ತಿಳಿಸಿಕೊಟ್ಟರು. ಎಲ್ಲರೂ ಮನೆಮೆನೆಗಳಲ್ಲಿ ಹನುಮಾನ್ ಚಾಲಿಸ್ ಪಠಿಸಬೇಕು. ಹುಟ್ಟುಹಬ್ಬದ ಆಚರಣೆ ಸಮಾಜಕ್ಕೆ ಸಂದೇಶವನ್ನು ನೀಡುವ ಕಾರ್ಯಕ್ರಮ ಆಗಬೇಕು. ದೇವರನ್ನು ತಲುಪಲು ಭಜನೆ ಬಹಳ ಸುಲಭ ಸಾಧನ. ಭಾವಯುಕ್ತವಾಗಿ ಭಜನೆ ಮಾಡಿದರೆ ಅಲ್ಲಿ ದೇವರು ನೆಲೆಸುತ್ತಾನೆ ಎಂದು ಅವರು ಆಶೀರ್ವಚನ ಮಾತುಗಳನ್ನಾಡಿದರು.
ಕಾರ್ಯಕ್ರಮದ ಕೇಂದ್ರದ ಕಾರ್ಯಾಧ್ಯಕ್ಷರಾದ ಮಾಜಿ ಶಾಸಕರು ಆದ ಶ್ರೀ ಪದ್ಮನಾಭ ಕೊಟ್ಟಾರಿಯವರು ಉಪಸ್ಥಿತರಿದ್ದು ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಸಮಾಜದ ಪರಿವರ್ತನೆಯಲ್ಲಿ ನಾವು ಸೇರಿಕೊಳ್ಳಬೇಕು. ಎಂದು ತಿಳಿಸಿದರು. ಕಲ್ಲಡ್ಕ ವಲಯದ ಅಧ್ಯಕ್ಷರಾದ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯದರ್ಶಿ ಶ್ರೀ ರಾಧಾಕೃಷ್ಣ ಅಡ್ಯಂತಾಯ ಇವರು ಮಾತನಾಡಿ ಕಾರ್ಯಕ್ರಮಗಳಿಂದ ಸಂಘಟನೆಯಾಗಬೇಕು. ಎಲ್ಲರೂ ಒಟ್ಟಾಗಿ ಸೇರಿಕೊಂಡು ಯಾವುದೇ ಕೆಲಸ ಮಾಡಿದರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ವಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಲಯದ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಬೈದರಡ್ಕ, ಕಾರ್ಯದರ್ಶಿ ನಾಗೇಶ್ ಬೊಂಡಾಲ, ಮಂದಿರದ ಅಧ್ಯಕ್ಷ ಹಾಗೂ ವಲಯದ ಉಪಾಧ್ಯಕ್ಷ ರಮೇಶ್ ಕರಿಂಗಾಣ, ಗೌರವಾಧ್ಯಕ್ಷ ಶಂಕರ ನಾರಾಯಣ ಐತಾಳ, ಹಿರಿಯರಾದ ಕಮಲಾ ಪ್ರಭಾಕರ ಭಟ್ ಕಲ್ಲಡ್ಕ, ಮಹಾಬಲ ಶೆಟ್ಟಿ ನಂದಾಗೋಕುಲ, ಗೋಳ್ತಮಜಲು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಿ ವಿ. ಪ್ರಭು, ವೆಂಕಟ್ರಾಯ ಪ್ರಭು, ಒಡಿಯೂರು ಗ್ರಾಮ ವಿಕಾಸದ ಯೋಜನಾಧಿಯಾದ ಜಯಲಕ್ಷ್ಮೀ, ಹಾಗೂ ಸೇವಾ ಧೀಕ್ಷಿತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಷಷ್ಠ್ಯಬ್ದಿ ಕಾರ್ಯಕ್ರಮದ ಕೇಂದ್ರೀಯ ಕಾರ್ಯದರ್ಶಿ ದಿನೇಶ ಅಮ್ಟೂರು ಸ್ವಾಗತಿಸಿ, ವಲಯದ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.