ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ-ಕಹಳೆ ನ್ಯೂಸ್
ಬಾಗೇಪಲ್ಲಿ : ರೈತರ ಆದಾಯಗಳನ್ನು ದ್ವಿಗುಣಗೊಳಿಸುವುದಾಗಿ ಬಹುದೊಡ್ಡ ಸುಳ್ಳುಗಳ ದಾಳಗಳನ್ನು ಉರುಳಿಸುತ್ತಾ, ಇರುವ ಅಲ್ಪ ಸ್ವಲ್ಪ ಆದಾಯವನ್ನು ಕಾರ್ಪೋರೇಟ್ ಲೂಟಿಗೆ ತೆರೆಯುವ ಕೇಂದ್ರ ಸರಕಾರದ ಕುತಂತ್ರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡ ಮಂಜುನಾಥ ರೆಡ್ಡಿ ಬಲವಾಗಿ ಖಂಡಿಸಿದ್ದಾರೆ.
ಅವರು ತಾಲೂಕು ಕಛೇರಿಯ ಮುಂದೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ರಸಗೊಬ್ಬರದ ಬೆಲೆಯನ್ನು ದಿಢೀರ್ ಏರಿಕೆ ಮಾಡಿರುವುದು ಸರಿಯಲ್ಲ. ಈಗಾಗಲೇ ಜನರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆಯಿಂದ ತತ್ತರಿಸಿದ್ದಾರೆ. ಇದೀಗ ರಸಗೊಬ್ಬರದ ಬೆಲೆ ಏರಿಕೆ ಕಂಡು ರೈತರು ದಂಗಾಗಿದ್ದಾರೆ. ಬೆಲೆ ಏರಿಕೆಯಿಂದ ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರ್ಕಾರ ಕೂಡಲೇ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (ಇಫ್ಕೋ) ಜೊತೆ ಚರ್ಚಿಸಿ, ರೈತರ ಮೇಲಿನ ಆರ್ಥಿಕ ಭಾರ ಕಡಿಮೆ ಮಾಡಬೇಕು. ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ತಾಲೂಕು ಪಂಚಾಯತಿ ಸದಸ್ಯ ಶ್ರೀರಾಮ್ ನಾಯಕ್ ಮಾತನಾಡಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಈಗಾಗಲೇ ನೊಂದು ಬೆಂದಿದ್ದಾರೆ. ಇಫ್ಕೋ, ಫ್ಯಾಕ್ಟಂಪಾಸ್ ಕಂಪನಿಗಳು ಇಡೀ ದೇಶಕ್ಕೆ ರಸಗೊಬ್ಬರ ಪೂರೈಕೆ ಮಾಡ್ತಿವೆ, ಈ ಎರಡೂ ಕಂಪನಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆಯನ್ನ ತಡೆಯಬಹುದಿತ್ತು, ಆದರೆ ರೈತರಿಗೆ ಮರಣ ಶಾಸನ ಬರೆಯಲು ಬೆಲೆ ಏರಿಕೆ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ಈ ಸಂದರ್ಭದಲ್ಲಿ ಎಂ.ಪಿ.ಮುನಿವೆಂಕಟಪ್ಪ, ಎಂ.ಎಸ್. ರಘುರಾಮ ರೆಡ್ಡಿ, ಶ್ರೀರಾಮಪ್ಪ, ಶ್ರೀರಾಮ ನಾಯಕ್, ಮಹಮದ್ ಅಕ್ರಂ, ಅಶ್ವಥಪ್ಪ, ಬಿ.ಆಂಜನೇಯ ರೆಡ್ಡಿ ಮುಸ್ತಫಾ, ಹೇಮಚಂದ್ರ, ಹಾಗೂ ರಮೇಶ್ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.