ಮಂಡ್ಯ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕನ ಹತ್ಯೆ-ಕಹಳೆ ನ್ಯೂಸ್
ಮಂಡ್ಯ : ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ಎಪ್ರಿಲ್ 14ರಂದು ಪ್ರೇಮ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಬಾಲನೋರ್ವನನ್ನು ಗಂಭೀರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಕಲ್ಲಹಳ್ಳಿಯ 17 ವರ್ಷದ ಬಾಲಕ ಅದೇ ಬಡಾವಣೆಯ ಬಾಲಕಿಯೋರ್ವಳನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ವಿಷಯ ತಿಳಿದ ಬಾಲಕಿಯ ಮನೆಯವರು ಬುಧವಾರ ರಾತ್ರಿ ಬಾಲಕನನ್ನು ಮನೆಗೆ ಕರೆದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬಾಲಕ ಗಂಭೀರ ಗಾಯಗೊಂಡಿದ್ದು, ಆತನಿಗೆ ಮುಂಜಾನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತಪಟ್ಟ ಬಾಲಕನ ತಂದೆ ಯುವತಿಯ ತಂದೆ ಶಿವಲಿಂಗು ವಿರುದ್ದ ಆರೋಪ ಮಾಡಿದ್ದಾರೆ. ಮಗನ ಮೇಲೆ ಹಲ್ಲೆ ಮಾಡಿದ ಶಿವಲಿಂಗುವನ್ನು ಬಂಧಿಸುವಂತೆ ಬಾಲಕಿಯ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಈ ಘಟನೆಯ ಪರಿಣಾಮ ಸ್ವಲ್ಪ ಸಮಯದವರೆಗೆ ಕಲ್ಲಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಇದಾದ ಬಳಿಕ ಮೃತ ಬಾಲಕನ ಪೋಷಕರು ಶವದೊಂದಿಗೆ ಪಶ್ಚಿಮ ಪೊಲೀಸ್ ಠಾಣೆಯ ಎದುರಿಟ್ಟು ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಈ ಘಟನೆಯ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.