Saturday, January 25, 2025
ಬಂಟ್ವಾಳ

ಮೀನು ಸಾಕಾಣಿಕೆಯಲ್ಲಿ ತೊಡಗಿ ಯಶಸ್ಸನ್ನು ಸಾದಿಸಿದವರು ಬಂಟ್ವಾಳದ ಅಮ್ಟೂರು ಪ್ರಜ್ವಲ್ ಪ್ರತೀಕ್ ಪಿಂಟೊ-ಕಹಳೆ ನ್ಯೂಸ್

ಬಂಟ್ವಾಳ : ವಿದೇಶದಲ್ಲಿ ಉತ್ತಮ ಸಂಪಾದನೆಯ ವೃತ್ತಿ ನಿರ್ವಹಿಸುತ್ತಿದ್ದ ಯುವಕನೋರ್ವ ಕಳೆದ 2 ವರ್ಷಗಳ ಹಿಂದೆ ಸ್ವದೇಶಕ್ಕೆ ಆಗಮಿಸಿ, ಇದೀಗ ತನ್ನ ಆಸಕ್ತಿಯ ಕ್ಷೇತ್ರ ಮೀನು ಸಾಕಾಣಿಕೆಯಲ್ಲಿ ಯಶಸ್ಸನ್ನು ಸಾದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಯೋಫ್ಲಾಕ್ ವಿಧಾನದ ಮೂಲಕ ಮೀನು ಕೃಷಿಯಲ್ಲಿ ತೊಡಗಿದ್ದು, ವಿದೇಶಿ ಸಂಪಾದನೆಗಿಂತಲೂ ಈ ಉದ್ಯಮದಲ್ಲಿ ಹೆಚ್ಚಿನ ಸಂಪಾದನೆಯ ವಿಶ್ವಾಸವನ್ನು ಹೊಂದಿದ್ದಾರೆ. ಬಂಟ್ವಾಳದ ಅಮ್ಟೂರು ಪ್ರಜ್ವಲ್ ಪ್ರತೀಕ್ ಪಿಂಟೊ ಅವರು ಮೀನು ಸಾಕಾಣಿಕೆಯಲ್ಲಿ ತೊಡಗಿರುವ ಯುವಕ. ಕೊಚ್ಚಿಯಲ್ಲಿ ಫಯರ್ ಆ್ಯಂಡ್ ಸೇಫ್ಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಇವರು ದುಬಾಯಿಯಲ್ಲಿ ಎಚ್‍ಆರ್ ವಿಭಾಗದಲ್ಲಿ ಕೆಲಸಕ್ಕೆ ಸೇರುತ್ತಾರೆ. ಬಳಿಕ ಮೀನು ಸಾಕಾಣಿಕೆಯ ಆಸಕ್ತಿಯನ್ನು ಹೊಂದಿ ಮನೆಯ ಆವರಣದಲ್ಲೇ ಮೀನುಗಾರಿಕೆಗಾಗಿ ಟ್ಯಾಂಕ್ ಮಾದರಿಯ ಘಟಕ ಮಾಡಿದ್ದಾರೆ.

ಪ್ರಸ್ತುತ ಪ್ರಜ್ವಲ್ ಅವರು ಸುಮಾರು 13 ಸಾವಿರ ಲೀ. ಸಾಮಥ್ರ್ಯದ ಟ್ಯಾಂಕ್ ನಿರ್ಮಿಸಿದ್ದು, ಒಟ್ಟು ಘಟಕಕ್ಕೆ ಅಂದಾಜು 3.5 ಲಕ್ಷ ರೂ. ವೆಚ್ಚ ತಗಲಿವೆ. ಇದರಲ್ಲಿ 1500ಷ್ಟು ಮೀನುಗಳನ್ನು ಸಾಕಬಹುದಾಗಿ 5 ತಿಂಗಳ ಬಳಿಕ ಪ್ರತಿ ಮೀನುಗಳು 500-600 ಗ್ರಾಂ. ತೂಕ ಬರುತ್ತದೆ. ಪ್ರಸ್ತುತ ಪ್ರತಿ ಕೆಜಿಗೆ 350 ರೂ.ಗಳಷ್ಟು ಧಾರಣೆ ಇದ್ದು, ಸ್ಥಳೀಯರು ಹಾಗೂ ಬೆಂಗಳೂರು ಸೇರಿದಂತೆ ಇತರ ಭಾಗಗಳಿಂದಲೂ ಮೀನು ಖರೀದಿಗಾಗಿ ಆಗಮಿಸುತ್ತಾರೆ. ಸಾಕಷ್ಟು ಮೀನು ಮಾರಾಟಗಾರರು ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದು, ಆದರೆ ಅವರಿಗೆ ಸಾಕಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಜ್ವಲ್ ಹೇಳುತ್ತಾರೆ.
ಪ್ರಸ್ತುತ ಇವರ ಬಳಿ ಚಿತ್ರಲಾಡಾ ಎಂಬ ಮೀನಿನ ತಳಿಯನ್ನು ಸಾಕುತ್ತಿದ್ದು, ಹಿಂದೆ ತಿಲಾಪಿಯಾ ತಳಿ ಸಾಕಿದ್ದರು. ಈಗಾಗಲೇ 2 ಬ್ಯಾಚ್‍ಗಳನ್ನು ಪೂರ್ಣಗೊಳಿಸಿದ್ದು, ವರ್ಷಕ್ಕೆ 2 ಬ್ಯಾಚ್‍ಗಳನ್ನು ಸಾಕಬಹುದಾಗಿದೆ. ಮೀನಿನ ಮರಿಗಳನ್ನು ಕೊಚ್ಚಿಯಿಂದ ತರಿಸುತ್ತಿದ್ದು, ಒಂದು ಮರಿಗೆ ಸುಮಾರು 7 ರೂ. ವೆಚ್ಚ ತಗಲುತ್ತದೆ.

ಸುಮಾರು 1500 ಸಾವಿರ ಮೀನುಗಳನ್ನು ಸಾಕುವುದಕ್ಕೆ 30 ಸಾವಿರ ರೂ.ವೆಚ್ಚ ತಗಲುತ್ತಿದ್ದು, ಕನಿಷ್ಠ ಧಾರಣೆಗೆ ಮೀನು ಮಾರಾಟವಾದರೂ 75 ಸಾವಿರ ರೂ. ಸಂಗ್ರಹವಾಗುತ್ತದೆ. ಇಲ್ಲಿ 4 ತಿಂಗಳಲ್ಲಿ ಸುಮಾರು 45 ಸಾವಿರ ಆದಾಯ ಗಳಿಸಿದಂತಾಗುತ್ತದೆ. ಆದರೆ ಮೀನಿನ ಧಾರಣೆ ಹೆಚ್ಚಿರುವ ಕಾರಣದಿಂದ ಹೆಚ್ಚಿನ ಆದಾಯ ಬರುತ್ತದೆ.

ಏನಿದು ಬಯೋಫ್ಲಾಕ್ ವಿಧಾನ.?

ನೈಟ್ರೋಜನ್ ಸೈಕಲಲ್ಲಿ ಬ್ಯಾಕ್ಟಿರಿಯಾವನ್ನಾಗಿ ಪರಿವರ್ತನೆ ಮಾಡಿಕೊಂಡು ಅದನ್ನು ಮೀನುಗಳಿಗೆ ಆಹಾರವಾಗಿ ಬಳಸುವ ಕ್ರಮವೇ ಬಯೋಫ್ಲಾಕ್ ವಿಧಾನವಾಗಿದೆ. ಆದರೆ ಇಂತಹ ಮೀನು ಸಾಕಾಣಿಕೆ ಬಹಳ ಅಪರೂಪವಾಗಿದೆ. ಇದು ಸಾವಯವವಾಗಿದ್ದು, ಇಲ್ಲಿ ಯಾವುದೇ ರಾಸಾಯನಿಕವನ್ನು ಬಳಸಲಾಗುವುದಿಲ್ಲ. ನೀರು ಕೂಡ ಅತ್ಯಂತ ಕಡಿಮೆ ಬೇಕಿದ್ದು, ಜತೆಗೆ ಡ್ರೈನೇಜ್‍ನಂತಹ ಸಿಸ್ಟಂ ಮಾಡಿಕೊಂಡು ವೇಸ್ಟ್ ನೀರನ್ನು ಹೊರಗೆ ಬಿಡುವ ವ್ಯವಸ್ಥೆ ಇರುತ್ತದೆ. ಇಲ್ಲಿ ಬ್ಯಾಕ್ಟಿರಿಯಾಗಳೇ ಮೀನುಗಳಿಗೆ ಆಹಾರವಾಗಿದ್ದು, ಹೀಗಾಗಿ ಇತರ ಆಹಾರವು ಕೂಡ ಕಡಿಮೆ ಸಾಲುತ್ತದೆ. ಈ ವಿಧಾನದಲ್ಲಿ ಸಾಕಿದ ಮೀನುಗಳು ದುರ್ವಾಸನೆ ರಹಿತವಾಗಿದ್ದು, ಜತೆಗೆ ಸಮುದ್ರದ ಮೀನಿನಷ್ಟೇ ರುಚಿಯಾಗಿರುತ್ತದೆ.

ವಿದೇಶಿ ಸ್ನೇಹಿತರಿಂದ ಮಾಹಿತಿ :

ಪ್ರಜ್ವಲ್ ಅವರು ವಿದೇಶದಲ್ಲಿ ದುಡಿಯುತ್ತಿದ್ದ ವೇಳೆ ಅಲ್ಲಿ ಬೇರೆ ಬೇರೆ ದೇಶಗಳ ವಿದೇಶಿ ಸ್ನೇಹಿತರ ಮೂಲಕ ಈ ವಿಧಾನದ ಮಾಹಿತಿ ಪಡೆದು ಬಳಿಕ ಗೂಗಲ್ ಸರ್ಚ್ ನಿಂದಲೇ ತಿಳಿದುಕೊಂಡು ಈ ಮಾದರಿಯನ್ನು ಅನುಷ್ಠಾನಗೊಳಿಸಿದ್ದಾರೆ. ಪ್ರಾರಂಭದಲ್ಲಿ ಮೀನುಗಳಿಗೆ ಖಾಯಿಲೆ ಬಂದಾಗ ಅದರ ಮಾಹಿತಿಗೆ ಮೀನುಗಾರಿಕೆ ಕಾಲೇಜು, ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಕಲ್ಲಡ್ಕದ ಬಳಿ ಬೃಹತ್ ಘಟಕ :

ಪ್ರಸ್ತುತ 500 ಕೆಜಿ ಮೀನು ಸಾಮಥ್ರ್ಯದ ಒಂದು ಟ್ಯಾಂಕನ್ನು ಹೊಂದಿದ್ದು, ಅಲ್ಲೇ ಪಕ್ಕದಲ್ಲಿ ಮತ್ತೊಂದು ಟ್ಯಾಂಕ್ ನಿರ್ಮಿಸುತ್ತಿದ್ದಾರೆ. ಇದರ ಜತೆಗೆ ಪ್ರಜ್ವಲ್ ಅವರ ಮಾರ್ಗದರ್ಶನದಲ್ಲೇ ಕಲ್ಲಡ್ಕದ ವ್ಯಕ್ತಿಯೊಬ್ಬರ ನಿವೇಶನದಲ್ಲಿ ಸುಮಾರು 2000 ಕೆಜಿ ಸಾಮಥ್ರ್ಯದ 4 ಟ್ಯಾಂಕ್‍ಗಳ ಕೆಲಸ ನಡೆಯುತ್ತಿದ್ದು, ಅದು ಬಹುತೇಕ ಅಂತಿಮ ಹಂತದಲ್ಲಿದೆ. ಜತೆಗೆ ಎಲ್ಲೆಲ್ಲಿಂದಲೇ ಆಸಕ್ತರು ಆಗಮಿಸಿ ಇವರ ಮೀನು ಕೃಷಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಮೀನು ಸಾಕಬೇಕು ಜತೆಗೆ ಅದರಲ್ಲಿ ಸಂಶೋಧನೆ ಮಾಡಬೇಕು ಎಂಬ ಆಸಕ್ತಿಯಿಂದಲೇ ವಿದೇಶಿ ಉದ್ಯೋಗವನ್ನು ಬಿಟ್ಟು ಬಂದಿದ್ದೇವೆ. ಅಲ್ಲಿನ ಸಂಪಾದನೆಗಿಂತಲೂ ಇಲ್ಲಿ ಹೆಚ್ಚು ದುಡಿಯಬಹುದು ಎಂಬ ವಿಶ್ವಾಸವಿದೆ. ಸ್ವಲ್ಪ ಮಟ್ಟಿನ ಶ್ರಮ ಅಗತ್ಯವಿದ್ದು, ಕಲ್ಲಡ್ಕದಲ್ಲಿ ಬಯೋಫ್ಲಾಕ್ ವಿಧಾನ ದೊಡ್ಡ ಘಟಕದ ಕೆಲಸ ಮಾಡುತ್ತಿದ್ದೇವೆ. ಈ ವಿಧಾನದಲ್ಲಿ ಮೀನುಗಳು ಹೆಚ್ಚು ರುಚಿಯಾಗಿದ್ದು, ಬೇಡಿಕೆ ಉತ್ತಮವಿದೆ.