ಕೆಲವರು ಏನು ತಿಂದರೂ ದಪ್ಪಗಾಗುವುದಿಲ್ಲ ಅದೇ ಕೆಲವರು ಏನೂ ತಿನ್ನದೆ ತೂಕ ಗಿಟ್ಟಿಸಿಕೊಳ್ಳುತ್ತಾರೆ. ಅತೀ ಆಹಾರವೂ ತೂಕಕ್ಕೆ ದಾರಿ ಮಾಡಿಕೊಡುತ್ತದೆ. ಶಾಶ್ವತವಾಗಿ ತೂಕ ಹೆಚ್ಚಳದಿಂದ ಮುಕ್ತಿ ಪಡೆಯಬೇಕಾದರೆ ಕೆಲವು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲಿ ಡಯಟ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ವ್ಯಾಯಾಮವೂ ಅತ್ಯಗತ್ಯ. ನಾವು ತಿನ್ನುವ ಆಹಾರವೂ ನಮಗೆ ಶಕ್ತಿಯನ್ನು ನೀಡಬೇಕಾದರೆ ಸಮತೋಲನ ಆಹಾರಗಳಾದ ಹಣ್ಣು, ಹಸಿರು ತರಕಾರಿಗಳು, ಒಣಹಣ್ಣುಗಳು, ಜ್ಯೂಸ್, ಸಲಾಡ್ ನಂತಹ ನೈಸರ್ಗಿಕ ಆಹಾರಗಳನ್ನು ಸೇವಿಸಬೇಕು. ಅದೇ ಜಂಕ್ ಪದಾರ್ಥಗಳಾದ ಪಿಜ್ಜಾ, ಬರ್ಗರ್, ಚಾಕೋಲೇಟ್, ಎಣ್ಣೆಯಲ್ಲಿ ಕರಿದ ತಿಂಡಿ -ತಿನಿಸುಗಳನ್ನು ತಿನ್ನುವುದರಿಂದ ಹೊಟ್ಟೆ ಸರಿಯಾಗಿ ತುಂಬುತ್ತದೆ ಆದರೆ ದೇಹಕ್ಕೆ ಶಕ್ತಿಯ ಬದಲು ಜಡತ್ವಕ್ಕೆ ಎಡೆ ಮಾಡಿಕೊಡುತ್ತದೆ. ಇದರಿಂದ ಬಹು ಬೇಗನೆ ಬೊಜ್ಜು ಕಾಣಿಸಿಕೊಳ್ಳುತ್ತದೆ. ಈಗ ಆಹಾರ ತಿಂದಾಗಿದೆ ಶಕ್ತಿಯೂ ಬಂದಿದೆ ಎಂದಾದ ಮೇಲೆ ಅದನ್ನು ಉಪಯೋಗಿಸಲವಕಾಶ ಒದಗಿಸಿಕೊಡಬೇಕು. ಆಗಲೇ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ದೇಹವು ಉಲ್ಲಾಸಮಯವಾಗಿರುತ್ತದೆ. ವ್ಯಾಯಾಮ ,ವಾಕಿಂಗ್, ಯೋಗದಂತಹ ಆರೋಗ್ಯ ಕ್ರಮಗಳನ್ನು ಅನುಸರಿಸಿದಾಗ ಚಯಾಪಚಯ ಕ್ರಿಯೆ ಸಕ್ರಿಯವಾಗಿ ನಡೆದು ತೂಕವೂ ಕಡಿಮೆಯಾಗುವುದರ ಜೊತೆಗೆ ದೇಹವು ಆರೋಗ್ಯವಾಗಿರುತ್ತದೆ.
– ಡಾ.ಶ್ರೀಲತಾ ಪದ್ಯಾಣಪ್ರಕೃತಿ ಚಿಕಿತ್ಸಾ ತಜ್ಞರು