ಉಪ್ಪಿನಂಗಡಿಯಲ್ಲಿ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉರಗ ಪ್ರೇಮಿ ನಾಗರಹಾವು ಕಚ್ಚಿ ಸಾವು-ಕಹಳೆ ನ್ಯೂಸ್
ಉಪ್ಪಿನಂಗಡಿ : ನೆಕ್ಕಿಲಾಡಿಯಲ್ಲಿ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉರಗ ಪ್ರೇಮಿಯೊಬ್ಬರು ನಾಗರಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು 34 ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ. ಆರ್ ಮಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಸ್ನೇಕ್ ಮುಸ್ತಾ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್ ಮಹಮ್ಮದ್ ಮುಸ್ತಫಾ ನಿನ್ನೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದ ಕಾರಣ ಅದನ್ನು ಹಿಡಿಯೋದಕ್ಕೆ ಅಲ್ಲಿಗೆ ತೆರಳಿದ್ದರು. ಅಲ್ಲಿ ಹಾವು ಹಿಡಿಯುತ್ತಿದ್ದ ಸಂದರ್ಭದಲ್ಲಿ ಇವರಿಗೆ ಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ವತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಇವರು ಮೃತಪಟ್ಟಿದ್ದಾರೆ.