ಮಂಗಳೂರು : ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ಹಾಸನ ಜಿಲ್ಲೆಯ ಆಲೂರು ನಂದಿಪುರ ಎಸ್ಟೇಟ್ ರೆಸಾರ್ಟ್‍ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಗರ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಠಾಣೆಯ ಮಹಿಳಾ ಹೆಡ್ ಕಾನ್‍ಸ್ಟೆಬಲ್ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
”ಹಾಸನದಲ್ಲಿ ನಡೆದ ರೇವ್ ಪಾರ್ಟಿ ಸಂದರ್ಭದಲ್ಲಿ ಮಹಿಳಾ ಕಾನ್‍ಸ್ಟೇಬಲ್ ಶ್ರೀಲತಾ ಸ್ಥಳದಲ್ಲಿದ್ದರು. ಹಾಗೆಯೇ ಆಕೆಯ ಮಗ ಅತುಲ್ ರೇವ್ ಪಾರ್ಟಿ ಆಯೋಜಿಸಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ” ಎಂದು ಎನ್. ಶಶಿಕುಮಾರ್ ಹೇಳಿದ್ದಾರೆ.
”ಇನ್ನು ಅಷ್ಟೇ ಅಲ್ಲದೆ ಈ ಮಹಿಳಾ ಕಾನ್‍ಸ್ಟೇಬಲ್ ರೆಸಾರ್ಟ್ ಮಾಲೀಕರ ಬಳಿ ತಾನು ಸಿಸಿಬಿ ಅಧಿಕಾರಿ ಎಂದು ಪರಿಚಯಿಸಿಕೊಂಡು ತಮ್ಮ ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಹಾಸನ ಪೊಲೀಸರು ತಪಾಸಣೆಗೆ ಬಂದಾಗ ಶ್ರೀಲತಾ ಅವರು ತಾನು ಮಂಗಳೂರು ಸಿಸಿಬಿ ಎಎಸ್‍ಐ ಎಂದು ಹಾಸನ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಮೂಲಕ ಹುದ್ದೆ ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಶಶಿಕುಮಾರ್ ಆರೋಪಿಸಿದ್ದಾರೆ.
ಹಾಗೂ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಕೋಟೆ ಬಳಿಯ ನಂದಿಪುರ ಎಸ್ಟೇಟ್‍ನಲ್ಲಿ ಎಪ್ರಿಲ್ 10ರಂದು ಶನಿವಾರ ರಾತ್ರಿ ರೇವ್ ಪಾರ್ಟಿ ನಡೆದಿದ್ದು, ಈ ವೇಳೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ದಾಳಿ ನಡೆಸಿತ್ತು. ಮಹಿಳಾ ಕಾನ್‍ಸ್ಟೇಬಲ್ ಸೇರಿ 130 ಯುವಕ-ಯುವತಿಯರನ್ನು ವಶಕ್ಕೆ ಪಡೆದಿದ್ದು ರೇವ್ ಪಾರ್ಟಿ ಆಯೋಜಿಸಿದ್ದ ಕಾನ್‍ಸ್ಟೇಬಲ್ ಪುತ್ರ ಅತುಲ್ ಎಂಬಾತ ಪರಾರಿಯಾಗಿದ್ದಾನೆ.
”ಶ್ರೀಲತಾ ಮತ್ತು ಅವರ ಪುತ್ರ ಅತುಲ್ ರೇವ್ ಪಾರ್ಟಿ ನಡೆದ ಎಸ್ಟೇಟ್ ಮಾಲಕರ ಜತೆ ನಿರಂತರವಾಗಿ ಸಂಪರ್ಕದಲ್ಲಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ. ಶ್ರೀಲತಾ ಅವರಿಗೆ ಪಾರ್ಟಿಯ ಆಯೋಜಕರ ಸಂಪರ್ಕವಿದ್ದು ಈ ಹಿನ್ನೆಲೆ ಅವರನ್ನು ಈಗಾಗಲೇ ಹಾಸನ ಪೊಲೀಸರು ವಶಕ್ಕೆ ಪಡೆದು ಠಾಣೆಯಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನಗರದಲ್ಲಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಆದರೆ ಶ್ರೀಲತಾ ಅವರ ಪುತ್ರ ಅತುಲ್ ಪರಾರಿಯಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ. ಈಗಾಗಲೇ ಹಾಸನ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.