ಪುತ್ತೂರು : ಎ.10ರಿಂದ ನಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಇಂದು ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತ್ತು.
ಎ.10 ರಂದು ಶ್ರೀ ದೇವರ ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದು, ಎ.17ರಂದು ಬ್ರಹ್ಮರಥೋತ್ಸವ ನಡೆಯಿತು. ಮತ್ತು ಎ.18ರಂದು ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ಶ್ರೀ ದೇವರು ದಾರಿಯುದ್ಧಕ್ಕೂ 56 ಕಟ್ಟೆ ಪೂಜೆ ಮತ್ತು ಅಂಗಡಿ ಮನೆಗಳಿಂದ ಆರತಿ ಸ್ವೀಕರಿಸುತ್ತಾ ಕಾಲ್ನಡಿಗೆಯಲ್ಲಿ ತೆರಳಿ, ಎ.19ರಂದು ಬೆಳಿಗ್ಗೆ ಗಂಟೆ 5 ಕ್ಕೆ ವೀರಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತಲುಪಿ ಬಳಿಕ ಕುಮಾರಧಾರ ಹೊಳೆಯ ತಟದಲ್ಲಿರುವ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ, ಗಂಟೆ 5.40ಕ್ಕೆ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನಕ್ಕೆ ಇಳಿದರು. ಅಲ್ಲಿ ಸ್ನಾನ ಮುಗಿಸಿ ಗಂಟೆ 6 ಕ್ಕೆ ಹೊರಟು ನದಿ ತಟದಲ್ಲಿರುವ ಕಟ್ಟೆಯಲ್ಲಿ ನೈವೇದ್ಯ, ಮಹಾಪೂಜೆ ಸ್ವೀಕರಿಸಿ ಓಡೋಡಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿದರು.
ದೇವಳದಲ್ಲಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಗುರು ತಂತ್ರಿಯವರು ಧ್ವಜಾವರೋಹಣ ಕಾರ್ಯಕ್ರಮ ಗಂಟೆ 8.30 ಕ್ಕೆ ನಡೆಯಿತು. ಆ ಮೂಲಕ ಪುತ್ತೂರು ಜಾತ್ರೆ ಸಂಪನ್ನಗೊಂಡಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಭಟ್ ಅವರು ದೇವರ ಒಳ ಪ್ರವೇಶಿಸುವ ವೇಳೆ ಸಂಪ್ರದಾಯದಂತೆ ರಾಜಗೋಪುರದಲ್ಲಿ ನಿಂತು ತೆಂಗಿನ ಕಾಯಿ ಒಡೆದು ದೇವರಿಗೆ ಸಮರ್ಪಣೆ ಮಾಡಿದರು. ಬಳಿಕ ದೇವರು ಒಳ ಪರವೇಶಿಸಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ರಾಮ್‍ದಾಸ್ ಹಾರಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ರಾಮಚಂದ್ರ ಕಾಮತ್, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ವೀರಮಂಗಲಕ್ಕೆ ಹೋಗುವ ವೇಳೆ ಶ್ರೀಧರ್ ತಂತ್ರಿಯವರು ವೈದ್ಯಿಕ ಕಾರ್ಯಕ್ರಮದಲ್ಲಿ ತೊಡಗಿದ್ದರು.