ಡಾ. ಬಿ.ಆರ್ ಅಂಬೇಡ್ಕರ್ ರವರ ಕನಸಿನಂತೆ ದೇಶ ಕಟ್ಟುವ ಜವಬ್ಧಾರಿ ನಮ್ಮದಾಗಬೇಕು ; ಶೇಖರ್ ಕುಕ್ಕೇಡಿ- ಕಹಳೆ ನ್ಯೂಸ್
ಬೆಳ್ತಂಗಡಿ : ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಮನೋರಂಜನೆಯಾಗಿ ಬಳಸಿಕೊಳ್ಳದೆ ಅವರ ಧ್ಯೇಯೋದ್ದೇಶಗಳನ್ನ ಈಡೇರಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಹೇಳಿದ್ದಾರೆ.
ನಿನ್ನೆ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ತಾಲೂಕು ಘಟಕದ ವತಿಯಿಂದ, ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನೆರವೇರಿದ ಡಾ. ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್‍ರವರ 130ನೇ ಜನ್ಮ ದಿನಾಚರಣೆ ಹಾಗೂ ಆದಿದ್ರಾವಿಡ ಸಮಾಜದ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ ಮತ್ತು ಶ್ರಿ ಸತ್ಯಸಾರಮಾನಿ ದೈವಪಾತ್ರಿಗಳಿಗೆ ಗೌರವಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ‘ಬಾಬಾ ಸಾಹೇಬರಿಲ್ಲ ದೇಶ ಹೇಗೆ ಇರುತ್ತಿತ್ತು ಎನ್ನುವುದನ್ನ ನಾವು ಆಲೋಚಿಸಬೇಕು, ಇಂದು ಜಾತಿ ಮೀಸಲಾತಿಯನ್ನು ತೆಗೆದು, ಆರ್ಥಿಕ ಮೀಸಲಾತಿಯನ್ನು ತರಲು ಪಣತೊಡುತ್ತಿದ್ದಾರೆ, ನಮ್ಮ ಸಮಾಜಕ್ಕೆ ಅನ್ಯಾಯವಾದಾಗ ಅದನ್ನ ವಿರೋಧಿಸಲು ಧ್ವನಿ ಎತ್ತಬೇಕು, ಅಂಬೇಡ್ಕರ್‍ರವರ ಕನಸಿನಂತೆ ದೇಶ ಕಟ್ಟುವ ಜವಬ್ದಾರಿ ನಮ್ಮದಾಗಬೇಕು, ಜೊತೆಗೆ ಶ್ರೀ ಸತ್ಯಸಾರಮಾನಿ ದೈವಗಳ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಕಾರ್ಯ ಮಾಡಬೇಕು ಎಂದರು.
ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ್ ಜಿ.ಎಸ್. ಮುಖ್ಯ ಭಾಷಣಕಾರರಾಗಿ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರು ಇಂದು ಮತದಾನದ ಹಕ್ಕು ಪಡೆಯಬೇಕಾದರೆ ಅದಕ್ಕಾಗಿ ಅಂಬೇಡ್ಕರ್‍ರವರು ಮಾಡಿದ ಹೋರಾಟ, ಅವರ ಜೀವನ ಸಂದೇಶ ಹಾಗೂ ಸಮುದಾಯದ ಸಂಸ್ಕøತಿಯ ನಾಶಕ್ಕೆ ನಡೆಯುತ್ತಿರುವ ಹುನ್ನಾರಗಳ ಬಗ್ಗೆ ವಿಚಾರಧಾರೆಗಳನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶೇಖರ ಧರ್ಮಸ್ಥಳ ವಹಿಸಿದ್ದರು. ಈ ಸಂದರ್ಭದಲ್ಲಿ ಆದಿದ್ರಾವಿಡ ಸಮಾಜದ 30 ಮಂದಿ ನೂತನ ಗ್ರಾಮ ಪಂಚಾಯತ್ ಸದಸ್ಯರನ್ನು, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಅಚ್ಚುಶ್ರೀ ಬಾಂಗೇರು, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ರಾಮು ಪಡಂಗಡಿ, ಯಕ್ಷಗಾನ ಕಲಾವಿದ ಮನೋಜ್ ವೇಣೂರು ಇವರನ್ನು ಸನ್ಮಾನಿಸಲಾಯಿತು. ಹಾಗೂ ಶ್ರೀ ಸತ್ಯಸಾರಮಾನಿ ದೈವಪಾತ್ರಿಗಳಿಗೆ ಗೌರವಾರ್ಪಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಲ್ಲಾಳ್‍ಭಾಗ್, ಜಿಲ್ಲಾಧ್ಯಕ್ಷ ರಘುನಾಥ ಅತ್ತಾವರ, ತಾಲೂಕು ಗೌರವಾಧ್ಯಕ್ಷ ಅಮ್ಮು ಕುಮಾರ್ ಅಳದಂಗಡಿ, ತಾಲೂಕು ಪಂಚಾಯತು ಸದಸ್ಯ ಓಬಯ್ಯ ಆರಂಬೋಡಿ. ಪಟ್ಟಣ ಪಂಚಾಯತು ಸದಸ್ಯೆ ಗೌರಿ, ಹಿರಿಯರಾದ ಅಮ್ಮು ಗುರಿಕಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲಾಡಿ, ಪಡಂಗಡಿ, ಮಡಂತ್ಯಾರು ವಲಯಗಳ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಧರ್ಮಸ್ಥಳ ವಲಯ ಘಟಕದ ವಿದ್ಯಾರ್ಥಿಗಳಿಂದ ಮಹಾನಾಯಕ ನೃತ್ಯ ರೂಪಕ ಅತ್ಯದ್ಭುತವಾಗಿ ಮೂಡಿಬಂತು. ಪತ್ರಕರ್ತೆ ಕುಮಾರಿ ಯೋಗಿನಿ ಸ್ವಾಗತಿಸಿ, ರಮೇಶ್ ಪಡಂಗಡಿ ಧನ್ಯವಾದವಿತ್ತರು. ಸುಕೇಶ್ ಮಾಲಾಡಿ ಕಾರ್ಯಕ್ರಮ ನಿರ್ವಹಿಸಿದರು. ಕೆ. ಗೋಪಾಲಕೃಷ್ಣ ಕುಕ್ಕಳ ಹಾಗೂ ಪದಾಧಿಕಾರಿಗಳು ಸಹಕರಿಸಿದರು.