ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 37ನೇ ಸಂಭ್ರಮಾಚರಣೆಯ ಪ್ರಯುಕ್ತ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ-ಕಹಳೆ ನ್ಯೂಸ್
ಬಂಟ್ವಾಳ : ಕಳೆದ 36 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 37ನೇ ಸಂಭ್ರಮಾಚರಣೆಯ ಪ್ರಯುಕ್ತ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಎ.25ರಂದು ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಪುಂಜಾಲಕಟ್ಟೆ ಯಲ್ಲಿ ಎ.18ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ವಿವರ ನೀಡಿದರು. ಸರಕಾರದ ಕೋವಿಡ್ ನಿಯಮಾನುಸಾರ ಸೀಮಿತ ಜನರ ಸೇರುವಿಕೆಯಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ ಎಂದರು. ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ, ಮಧ್ಯಾಹ್ನ 11.44ರ ಶುಭ ಮುಹೂರ್ತದಲ್ಲಿ 16 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮೀನುಗಾರಿಕೆ, ಬಂದರು, ಒಳನಾಡು ಸಚಿವ ಎಸ್.ಅಂಗಾರ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ವಾರ್ತಾ ನಿರೂಪಕ ಜಯಪ್ರಕಾಶ್ ಉಪ್ಪಳ ಮಂಗಳ ಸೂತ್ರ ವಿತರಿಸಲಿರುವರು. ಶಾಸಕ ಹರೀಶ್ ಪೂಂಜ ಸಹಿತ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ ವಿವಾಹ ಭೋಜನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಂಬಳ ಕ್ಷೇತ್ರದ ಪಾಣಿಲ ಬಾಡ ಪೂಜಾರಿ, ಸಮಾಜ ಸೇವೆಗೆಗಾಗಿ ಕಾಂತಿ ಶೆಟ್ಟಿ, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಸಾಂಸ್ಕೃತಿಕ ಕ್ಷೇತ್ರದ ಸದಾಶಿವ ಡಿ.ತುಂಬೆ ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ, ವಿವಿಧ ಕ್ಷೇತ್ರಗಳ ಸಾಧಕರಾದ ಸುಧಾಕರ ಸಾಲ್ಯಾನ್, ಜಾಕೋಬ್ ಮೋರಾಸ್, ರಾಜೀವ ಶೆಟ್ಟಿ ಎಡ್ತೂರು, ರಮಾನಂದ ನೂಜಿಪ್ಪಾಡಿ, ಕ್ಷಿತಿ ಕೆ.ರೈ, ಯಕ್ಷಚಿಗುರು ಕಲಾ ತಂಡ ಅಜಿಲಮೊಗರು ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪ್ರಮುಖರಾದ ರಾಜೇಶ್ ಪಿ. ಬಂಗೇರ, ಪ್ರಭಾಕರ ಪಿ.ಎಂ., ಎಂ.ಪಿ.ಶೇಖರ್, ರಂಜಿತ್ ಎಚ್.ಡಿ., ಅಮೃತಾ ಎಸ್. ಉಪಸ್ಥಿತರಿದ್ದರು.