ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ-ಕಹಳೆ ನ್ಯೂಸ್
ಬಾಗೇಪಲ್ಲಿ : ತಾಲೂಕಿನ ವಿವಿಧ ಬೆಟ್ಟಗಳ ಮೇಲೆ ಕೋಟೆಗಳನ್ನು ನಿರ್ಮಿಸಿಕೊಂಡು ಆಡಳಿತ ನಡೆಸಿದ ಪಾಳೇಗಾರರು ಹಾಗೂ ಬೆಟ್ಟದ ಮೇಲಿನ ದೇಗುಲಗಳ ಸಮೀಪ ಪೂರ್ವಜರು ಕುಡಿಯುವ ನೀರಿನ ಅಸರೆಗಾಗಿ ಶತಮಾನಗಳ ಹಿಂದೆಯೇ ನಿರ್ಮಿಸಿರುವ ಇತಿಹಾಸಿಕ ಮಹತ್ವದ ಕಲ್ಯಾಣಿಗಳು ಈಗ ಅವಸನಾದ ಅಂಚಿಗೆ ತಲುಪಿವೆ.
ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಅಪರೂಪದ ಐತಿಹಾಸಿಕ ಸ್ಮಾರಕಗಳ ಮೇಲಿನ ನಿರ್ಲಕ್ಷ್ಯದಿಂದ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ಸ್ಮಾರಕಗಳಿಗೆ ಅವನತಿಯ ಗತಿ ಹಿಡಿದೆ. ನೈಜ ಭಾಗ್ಯನಗರದ ಬೆಡಗು ನಾಶವಾಗುತ್ತದೆ!!
ತಲೆ ತಲೆಮಾರಿಗೂ ಜಲ ಸುರಕ್ಷತೆ ಇರಲಿ ಎಂದು ಬಹಳ ವೈಜ್ಞಾನಿಕವಾಗಿ ನೀರಿನ ಕುಂಟೆ, ಕಲ್ಯಾಣಿ ಹಾಗೂ ಹೊಂಡಗಳನ್ನು ಪಾಳೇಯಗಾರರು ನಿರ್ಮಾಣ ಮಾಡಿದ್ದರು. ಪ್ರಸಕ್ತ ಕಾಲಕ್ಕೆ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಈ ನಿರ್ಮಾಣಗಳ ಬಗ್ಗೆ ಪುರಾತತ್ತ್ವ ಇಲಾಖೆ, ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಗಂಭೀರ ಅಧ್ಯಯನ ಮಾಡಬೇಕಿದೆ. ತಾಲೂಕಿನ ಕನ್ನಡಪರ ಹೋರಾಟಗಾರರು, ಬುದ್ಧಿ ಜೀವಿಗಳು, ಸಾಹಿತಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅಧ್ಯಯನದ ಮಾತಿರಲಿ, ಇವುಗಳಿಗೆ ದಿಕ್ಕೂದೆಸೆ ಇಲ್ಲದಾಗಿದೆ. ತಾಲೂಕು ಆಡಳಿತವಂತೂ ದಿವ್ಯ ನಿರ್ಲಕ್ಷ್ಯ ತಾಳಿದೆ!!
ದೇವಿಕುಂಟೆ ಅಕ್ಕಮ್ಮ ಬೆಟ್ಟವು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಇದಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಿಕುಂಟೆ ಕೋಟೆಯನ್ನು ಆಳಿದ ರಾಜರು ನೀರಾವರಿ ಮೂಲಗಳಿಗೆ ಪ್ರಮುಖ ಆದ್ಯತೆ ಕೊಟ್ಟಿರುವುದು ಈಗಲೂ ಕಾಣಬಹುದು. ಬಾಗೇಪಲ್ಲಿ ತಾಲೂಕಿನ ಬಿ.ಎಲ್ ರೈಸ್ ಶಾಸನಗಳಲ್ಲಿ ರಾಜರು ಕಟ್ಟಿರುವ ಹತ್ತು ಹಲವು ನೀರಿನ ಮೂಲಗಳನ್ನು ಮಾಹಿತಿ ಲಭ್ಯವಿದೇ ಎನ್ನುತ್ತಾರೆ ಬಾಗೇಪಲ್ಲಿ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎನ್.ಶಿವಣ್ಣ.
ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕುಂಟೆ ಗಿರಿ ಶ್ರೇಣಿ ಮತ್ತು ಬೆಟ್ಟಗುಡ್ಡಗಳ ಕಾಡಿನಿಂದ ಕೂಡಿದ ಗ್ರಾಮ. ಈ ಗ್ರಾಮಕ್ಕೆ ಗಡಿ ಪ್ರದೇಶ ಜೊತೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ತಾಲೂಕಿನಲ್ಲಿ ಅಭಿವೃದ್ಧಿಯಾಗದ ಹಾಗೂ ಹಿಂದುಳಿದ ಗಡಿ ಗ್ರಾಮ ಬೆಟ್ಟ ಗುಡ್ಡ ಕಾಡಿನ ನಡುವೆಯೇ ಇದೆ. ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಮನೆ ರಹಿತರು, ನಿವೇಶನ ರಹಿತರು ಬಹಳ ಇದ್ದು, ಎಲ್ಲರೂ ಕೂಲಿ ಕಾರ್ಮಿಕರು, ರೈತರು.
ಬಾಗೇಪಲ್ಲಿ ಇನ್ನೇನು ಭಾಗ್ಯನಗರ ಆಗುವುದರಲ್ಲಿದೆ. ಶತಮಾನಗಳ ಹಿಂದೆ ಈ ಭಾಗದ ಜನರಿಗೆ ಭಾಗ್ಯದ ಬಾಗಿಲಾಗಿದ್ದ ಈ ಹೆಬ್ಬಾಗಿಲಿನ ಗತಿ ಹೀಗಿದೆ. ಹೋರಾಟಗಾರರ ಕಣ್ಣಿಗೆ ಇದೆಲ್ಲ ಕಾಣುತ್ತಿಲ್ಲ!! ಯಾಕೆ?
ದೇವಿಕುಂಟೆ ಕೋಟೆಯ ರಾಜರ ಕಾಲದಲ್ಲಿ ಕಟ್ಟಿರುವ ನೀರಾವರಿ ಕಟ್ಟಡಗಳು ಹೀಗಿವೆ; ಅಕ್ಕಮ್ಮ ಬೆಟ್ಟದ ಮೇಲೆ ದೊಣೆ, ಶಿವನ ಕಲ್ಯಾಣಿ, ಹೊಂಡ, ಬಾವಿ, ಓಕಿರಿ ಬಾವಿ, ಸಂಜೀವಮ್ಮ ಕೆರೆ, ಪಾಪಮ್ಮ ಬಾವಿ, ಚಿಂತಾಲಕುಂಟೆ ಕೆರೆ, ಗುಣಮನುಕುಂಟೆ, ನಳನ್ನಕುಂಟೆ, ನಾಕಚೆರವು ಗಡ್ಡೆಗಳ ಕೆರೆ, ಒಡ್ಡಿಯೋನಕುಂಟೆ, ಜೋವಪ್ಪಕುಂಟೆ, ಬಾರಗಡ್ಡ ಚಿಲಮಿ.. ಹೀಗೆ ಹತ್ತು ಹಲವು ನೀರಿನ ನೆಲೆಗಳನ್ನು ಕಟ್ಟಿಸಿದ್ದಾರೆ.
ಇಲ್ಲಿನ ರಾಜರು 800 ವರ್ಷಗಳ ಹಿಂದೆ ರೈತರಿಗೆ ಹಾಗೂ ಜನರಿಗೆ ವ್ಯವಸಾಯಕ್ಕೆ ಹಾಗೂ ಬಳಕೆಗೆ ಅನುಕೂಲವಾಗುವಂತೆ ವೈಜ್ಞಾನಿಕವಾಗಿ ಗಮನ ಹರಿಸಿದ್ದಾರೆ. ಈಗಿನ ನಾಯಕರಿಗೆ ಮಾದರಿ ಆಗುವಂತೆ ಆಡಳಿತವನ್ನು ಮಾಡಿರುವ ದೇವಿಕುಂಟೆ ರಾಜರ ಕೊಡುಗೆ ಅಮೋಘವಾದ್ದದ್ದು ಎನ್ನುತ್ತಾರೆ ಸ್ಥಳೀಯರಾದ ಗೋಪಾಲ್.
ಸಂಜೀವಮ್ಮ ಕೆರೆ ಕೆಳಗೆ ಹಾಗೂ ಚಿಂತಕಕುಂಟೆ ಕೆರೆ ಕೆಳಗೆ ಬೆಳೆದ ಭತ್ತವನ್ನು ದೇವಿಕುಂಟೆ ಕೋಟೆ ಮೇಲೆ ಧಾನ್ಯ ಸಂಗ್ರಹ ಕೊಠಡಿಯಲ್ಲಿ ಸಂಗ್ರಣೆ ಮಾಡುತಿದ್ದ ಸಂಗ್ರಹ ಕಟ್ಟಡವನ್ನು ಕಾಣಬಹುದು.
ಇಂತಹ ಹತ್ತು ಹಲವು ಕೆರೆ, ಕುಂಟೆ, ಬಾವಿ, ಹೊಂಡ, ನಾಲೆ, ಕಲ್ಯಾಣಿ, ಹಳ್ಳ, ಪುಟ್ಟ ಝರಿ, ಚಿಲುಮೆ ಇತ್ಯಾದಿ ನೀರಾವರಿ ಮೂಲಗಳನ್ನು ಜಿಲ್ಲಾಡಳಿತ ಗಮನ ಹರಿಸಿ ಪುನಾ ನಿರ್ಮಾಣ ಮಾಡಬೇಕು ಎನ್ನುತ್ತಾರೆ ಡಿ.ಸಿ. ಶ್ರೀನಿವಾಸ್.
ಅಪರೂಪದ ಶಾಸನಗಳು, ಕೆತ್ತನೆಗಳು. ಬೆಲೆ ಕಟ್ಟಲಾರದ ಐತಿಹಾಸಿಕ ದಾಖಲೆಗಳು. ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಇದಕ್ಕಿಂದ ಜೀವಂತ ಸಾಕ್ಷಿ ಬೇಕಿಲ್ಲ. ಅಲ್ಲವೇ?
ನಿರಂತರ ನಿರ್ಲಕ್ಷ್ಯ
ಅಮೋಘವಾದ ಇತಿಹಾಸ ಹೊಂದಿರುವ ಈ ಪ್ರದೇಶವನ್ನು ಜಿಲ್ಲಾಡಳಿತ ಮೊದಲಿನಿಂದಲೂ ನಿರ್ಲಕ್ಷ್ಯ ಮಾಡಿದೆ. ಹಳೆಯ ಕಟ್ಟಡಗಳು ಪಾಳು ಬಿದ್ದಿದ್ದು, ತಲೆ ತಲೆಮಾರಿಗೂ ರಕ್ಷಿಸಿಕೊಳ್ಳಬೇಕಾದ ಐತಿಹಾಸಿಕ ಸ್ಮಾರಕಗಳು ವಿನಾಶದ ಅಂಚಿನಲ್ಲಿವೆ. ಪ್ರಾಚ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಕಣ್ಣಿಗೆ ಈ ಅಪರೂಪದ ಸ್ಮಾರಕಗಳು ಬಿದ್ದಿಲ್ಲ.
ಬಾಗೇಪಲ್ಲಿ ತಾಲ್ಲೂಕು ಐತಿಹಾಸಿಕ ಅತ್ಯಂತ ಶ್ರಿಮಂತ ಪರಂಪರೆಯನ್ನು ಹೊಂದಿರುವ ತಾಣವಾಗಿದೆ. ಗುಮ್ಮನಾಯಕನ ಪಾಳ್ಯ, ಗಡಿದಂ, ಜಡಲಭೈರವೇಶ್ವರ ಸ್ವಾಮಿ ದೇಗುಲ ಸೇರಿದಂತೆ ಅನೇಕ ಐತಿಹಾಸಿಕ ತಾಣಗಳು ಇಲ್ಲಿವೆ. ಇವುಗಳನ್ನು ಸಂರಕ್ಷಿಸಿ ಉಳಿಸುವ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಶಾಸಕರು, ತಾಲೂಕಿನ ಜನಪ್ರತಿನಿಧಿಗಳು ಗಮನ ಕೊಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.