Friday, September 20, 2024
ರಾಜಕೀಯ

ಮತದಾನ ಅವಧಿ ಒಂದು ಗಂಟೆ ವಿಸ್ತರಣೆ ; ಸಂಜೆ 6 ಗಂಟೆ ತನಕ ಮತ ಚಲಾವಣೆಗೆ ಅವಕಾಶ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12ರಂದು ನಡೆಯಲಿರುವ ಮತದಾನದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ಒಂದು ಗಂಟೆ ವಿಸ್ತರಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಈ ಕುರಿತು ಮಾಹಿತಿ ನೀಡಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮತದಾನ ಅವಧಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆ ತನಕ ನಿಗದಿಪಡಿಸಲಾಗಿತ್ತು. ಆದರೆ, ಮತದಾನದ ಅವಧಿ ವಿಸ್ತರಿಸುವಂತೆ ಕೆಲವು ಸಲಹೆ ಮತ್ತು ಮನವಿಗಳು ಬಂದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಲಾಗಿತ್ತು. ಇದಕ್ಕೆ ಆಯೋಗ ಒಪ್ಪಿಕೊಂಡಿದ್ದು, ಮತದಾನ ಅವಧಿಯನ್ನು ಒಂದು ಗಂಟೆ ವಿಸ್ತರಿಸಲು ಒಪ್ಪಿಕೊಂಡಿದೆ. ಅದರಂತೆ ಮೇ 12ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ ಕೊಡಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಬೇಕು ಎಂಬ ಬೇಡಿಕೆ ಇತ್ತು. ಆದರೆ, ಇದಕ್ಕೆ ಆಯೋಗ ಒಪ್ಪಿಲ್ಲ. ಈಗಾಗಲೇ 58 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 3.65 ಲಕ್ಷ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿಕೊಳ್ಳಲಾಗಿದೆ. ಈ ಹಂತದಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಿದರೆ ಸಿಬ್ಬಂದಿ ಕೊರತೆ ಎದುರಾಗುತ್ತದೆ. ಹಾಗಾಗಿ, ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವ ಬೇಡಿಕೆ ಈ ಚುನಾವಣೆಯಲ್ಲಿ ಕಾರ್ಯಾಗತಗೊಳಿಸಲು ಸಾಧ್ಯವಿಲ್ಲ. 450 ಸಖೀ ಮತಗಟ್ಟೆಗಳನ್ನು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಅನೇಕ ಜಿಲ್ಲೆಗಳಿಂದ ಬೇಡಿಕೆ ಬಂದಿರುವುದರಿಂದ ಸುಮಾರು 600 ಸಖೀ ಮತಗಟ್ಟೆಗಳ ಸ್ಥಾಪನೆಯಾಗಲಿವೆ ಎಂದು ಸಂಜೀವ ಕುಮಾರ್‌ ತಿಳಿಸಿದರು.

ಜಾಹೀರಾತು

ರಾಜ್ಯದ ಎಟಿಎಂಗಳಲ್ಲಿ ಹಣದ ಕೊರತೆ ಇರುವುದಕ್ಕೆ ಚುನಾವಣೆ ಕಾರಣ ಎಂದು ಹೇಳುವುದು ಸರಿ ಅನಿಸುವುದಿಲ್ಲ. ಎಟಿಎಂಗಳಲ್ಲಿ ಹಣದ ಕೊರತೆ ಯಾಕಿದೆ ಎಂದು ರಿಸರ್ವ್‌ ಬ್ಯಾಂಕ್‌ನವರಿಗೆ ಕೇಳಬೇಕಷ್ಟೇ.
– ಸಂಜೀವ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಸಹಕಾರ ಬ್ಯಾಂಕುಗಳ ಮೇಲೆ ನಿಗಾ
ಸಹಕಾರಿ ಬ್ಯಾಂಕುಗಳ ಮೂಲಕ ಚುನಾವಣೆಗೆ ಹಣ ವರ್ಗಾವಣೆ ಆಗುತ್ತಿದೆ ಎಂಬ ದೂರುಗಳು ಕೆಲವು ಕಡೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕುಗಳ ದೈನಂದಿನ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದ್ದಾರೆ. ವಿಶೇಷವಾಗಿ ಸಹಕಾರಿ ಬ್ಯಾಂಕುಗಳ ವಹಿವಾಟುಗಳ ಮೇಲೆಯೂ ಕಣ್ಣಿಡಲಾಗುತ್ತದೆ ಎಂದಿದ್ದಾರೆ.

ಕಂಬಾರ “ಮತ ಸಂದೇಶ’
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ಆಯೋಗ ನೇಮಕ ಮಾಡಿಕೊಂಡಿದೆ. ಅದರಂತೆ ಗುರುವಾರ ಚಂದ್ರಶೇಖರ ಅವರ “ಮತ ಸಂದೇಶ’ದ ವಿಡಿಯೋ ಬಿಡುಗಡೆ ಮಾಡಲಾಯಿತು. ಇದರ ಜೊತೆಗೆ ನಟ ಪುನಿತ್‌ ರಾಜ್‌ಕುಮಾರ್‌, ನಟಿ ಪ್ರಣಿತಾ ಅವರ ಮತ ಸಂದೇಶಗಳನ್ನೂ ಸಹ ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಚಂದ್ರಶೇಖರ ಕಂಬಾರ, ಮತದಾನ ದೇಶದ ಪ್ರಜೆಗಳಿಗೆ ಸಿಕ್ಕಿರುವ ಹಕ್ಕು, ಕರ್ತವ್ಯ ಮತ್ತು ಸೌಭಾಗ್ಯ. ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು.