ಯಕ್ಷಗಾನದ ಧ್ವನಿಸುರುಳಿ ಯುಗದಲ್ಲಿ ಇವರ ಹೆಸರು ಪರಿಚಿತ. ಅದೆಷ್ಟು ಧ್ವನಿಸುರುಳಿಗಳಲ್ಲಿ ಶ್ರೀ ಸೀತಾರಾಮ
ತೋಳ್ಪ್ಪಾಡಿತ್ತಾಯರು ನುಡಿಸಿದ್ದಾರೋ? ಎಂಭತ್ತು ತೊಂಬತ್ತರ ದಶಕದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಅನಿವಾರ್ಯ ಅತಿಥಿ ಕಲಾವಿದರಾಗಿಯೂ, ಕಲಾವಿದರ ಸಂಯೋಜಕರಾಗಿಯೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಲೂ ಇದ್ದಾರೆ. ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಿಗೆ ಸರಿಸಮವಾಗಿ ಹೊಂದುವ ಕಲಾಪ್ರಸ್ತುತಿ ತೋಳ್ಪ್ಪಾಡಿತ್ತಾಯರದು. ಶ್ರೀಯುತರ ತಂದೆ ರಾಘವೇಂದ್ರ ತೋಳ್ಪ್ಪಾಡಿತ್ತಾಯರು ಭಾಗವತರಾಗಿದ್ದವರು. ಕಿರಿಯ ವಯಸ್ಸಿಗೇ ಯಕ್ಷಗಾನದ ಸತ್ ಸಂಸ್ಕಾರ ಇವರ ಭಾವ ಬುದ್ದಿಗಳಿಗೆ ಇಳಿದವು. ಪೂರಕವಾಗಿ ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರಿಗೆ ದೊರಕಿದುದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸುತ್ತಿದ್ದಂತಹಾ ಯಕ್ಷಗಾನ ಕೇಂದ್ರದ ಸತ್ ಸಹವಾಸ. ದಿ.ಕುರಿಯ ವಿಠಲ ಶಾಸ್ತ್ರಿಗಳು, ದಿ. ಮಾಂಬಾಡಿ ನಾರಾಯಣ ಭಟ್ಟರು ಮತ್ತು ನೆಡ್ಲೆ ನರಸಿಂಹ ಭಟ್ಟರಂತಹಾ ಮಹಾ ಮೇರು ಕಲಾವಿದರೊಡಗಿನ ನಿಕಟ ಸಂಪರ್ಕದಿಂದ ಒದಗಿದ ಕಲಿಕೆಯ ನಿಶ್ಚಿತ ಮತ್ತು ಸುಗಮ ದಾರಿಯಿಂದಾಗಿ ಕಲೆಯಲ್ಲಿ ಸ್ಪಷ್ಟ ಚಿತ್ರ ಅವರಿಗೆ ದೊರಕಿತು.
ಯಕ್ಷಗಾನ ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದ ತೋಳ್ಪ್ಪಾಡಿತ್ತಾಯರಿಗೆ ಹಿಮ್ಮೇಳ ಒಲಿದದ್ದು ಲೀಲಾಜಾಲವಾಗಿ. ಹಿರಿಯ ಉತ್ಕೃಷ್ಟ ಹಿಮ್ಮೇಳವಾದಕರ ಸಾಂಗತ್ಯದ ಅದೃಷ್ಟ ಇವರ ಜತೆಗಿತ್ತು. ಕಲಿಕೆಗೆ ಬೇಕಾದ ಅದಮ್ಯ ಉತ್ಸಾಹ ಮೊದಲೇ ಇತ್ತು. ಧರ್ಮಸ್ಥಳ ಕ್ಷೇತ್ರದ ಕಲಾ ಪರಿಸರದಲ್ಲಿ ಇವರಲ್ಲಿನ ಕಲೆ ತಾನೇತಾನಾಗಿ ಬೆಳೆದು ನಿಂತಿತು. ದಿ.ಕಡತೋಕಾ ಮಂಜುನಾಥ ಭಾಗವತರು, ದಿ.ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಚುರುಕು ಗರಡಿಯಲ್ಲಿ ತೋಳ್ಪ್ಪಾಡಿತ್ತಾಯರೂ ಚುರುಕಾದರು. ಬೆಳೆದೇ ಬಿಟ್ಟರು. ಅತ್ಯಂತ ಎಳೆಯ ವಯಸ್ಸಿಗೇ ಘಟಾನುಘಟಿ ಕಲಾವಿದರಿಗೆ ಸಾತ್ ಕೊಟ್ಟರು.
ಚೆಂಡೆ ಎಂಬುದು ಸೀತಾರಾಮ ತೋಳ್ಪ್ಪಾಡಿತ್ತಾಯರಿಗೆ passion. ಹಿರಿಯ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್ಟರು ಇವರ ಚೆಂಡೆ ನುಡಿತದ ಬಗ್ಗೆ ಹೇಳುವುದು ಹೀಗೆ “ ತೋಳ್ಪ್ಪಾಡಿತ್ತಾಯರನ್ನು ನಿದ್ದೆಯಿಂದೆಬ್ಬಿಸಿ ಚೆಂಡೆ ಕೊಟ್ಟು ಹತ್ತನೇ ಕಾಲದಲ್ಲಿ ಪದ ಕೊಟ್ಟರೂ ಆ ಕೈಗಳು ಆ ಲಯಕ್ಕೆ ಹೋಗುತ್ತದೆ” ಅಂತಹಾ ಕೈಗಳವು ಎಂದು. ಅಸ್ಖಲಿತ ಉರುಳಿಕೆ. ಲೀಲಾಜಾಲವಾಗಿ ಚೆಂಡೆಯ ನುಡಿತಗಳು. ಅಷ್ಟೇನು “ ನೆಗ್ಗಿ ನೆಗ್ಗಿ” ನುಡಿಸುವ ವಿಧಾನವೇನಲ್ಲ. ಅವರ ಚೆಂಡೆ ನುಡಿತದ ವಿಧಾನದಲ್ಲಿ ದೃಢತೆ ಇದೆ. ಒಂದು vision ಇದೆ. ಅವರಲ್ಲಿನ administrator ಅವರ ಚೆಂಡೆ ನುಡಿಸಾಣಿಕೆಯಲ್ಲೂ ಆಗಾಗ ಇಣುಕುತ್ತಾನೆ. ರಂಗದಲ್ಲಾಗುವ ಪ್ರತಿ ಆಗುಹೋಗುಗಳ ಗಮನ , ಪಾತ್ರಧಾರಿಗಳಿಗೆ ಇವರು ಕೊಡುವ ಸ್ಪಂದನ , ರಂಗ ಪ್ರಜ್ಞೆಗಳಂತಹಾ ಉತ್ತಮ ಗುಣಗಳಿಂದ ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರು ನಮಗೆ ಮುಖ್ಯರಾಗುತ್ತಾರೆ. ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರ ಬಾಲ್ಯದ ಒಡನಾಡಿಯಾದ ಹಿರಿಯ ಮದ್ದಲೆಗಾರ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಹೇಳುತ್ತಾರೆ “ ಅವರ ಉರುಳಿಕೆ
ನನಗೆ ಯಾವಾಗಲೂ ಅಚ್ಚರಿ” “ ಅವರ ಉರುಳಿಕೆ ನುಡಿಸುವಾಗಿನ ಹಸ್ತದ ಯ ವಿನ್ಯಾಸ ಎಲ್ಲರಂತಲ್ಲ. ತುಂಬಾ ವಿಶಿಷ್ಟವಾದದ್ದು” “ ಮಾರವಿ ಏಕ ತಾಳಕ್ಕೆ ನುಡಿಸುವ ದ್ವಿ ಕಾಲದ ಉರುಳಿಕೆ ಸುಂದರವಾದದ್ದು”.
ತಾವು ಮಾಡುವ ಕೆಲಸ ಮುಖ್ಯ. ಆಟ/ಕೂಟಗಳಲ್ಲಿಗೆ ಹೋದ ಕೂಡಲೇ ಮೊದಲು ಮಾಡುವ ಕೆಲಸ ಚೆಂಡೆ ಮದ್ದಳೆಗಳು ಸರಿಯಾಗಿವೆಯೇ. ಅವುಗಳ ಶ್ರುತಿ (ಸುರ್ ತಾನ್) ಮಾಡಿ ಅವುಗಳಿಗೆ ಯಥಾಯೋಗ್ಯ ಸ್ಥಳಗಳನ್ನು ಗುರುತಿಸಿ ಇಟ್ಟಮೇಲೆಯೇ ಊಟವೋ ತಿಂಡಿಯೋ – ಅವುಗಳ ಬಗೆಗೆ ಯೋಚನೆ. ರಂಗಸ್ಥಳದ ಅವಲೋಕನ, ಧ್ವನಿವರ್ಧಕ ಗಳು ಸರಿಯಾಗಿವೆಯೋ ಎಂಬ ವಿಚಿಕ್ಸಕ ನೋಟ, ಸರಿ ಇಲ್ಲದಿದ್ದರೆ ಸಂಬಂಧಿಸಿವರಿಗೆ ನಿರ್ದೇಶನ ಕೊಟ್ಟು ಮುಂದಿನ ಕೆಲಸ . ಹಾಗೆಯೇ ಚೆಂಡೆಗೆ ನಿಂತುಕೊಳ್ಳುವ ಜಾಗ ಸರಿಯಿದೆಯೇ ಎಂಬ ವೀಕ್ಷಣೆ. ಅಲ್ಲೊಂದು ನೆಲಹಾಸು ಹಾಕಿ ಅದರಮೇಲೆ ನಿಂತು ಚೆಂಡೆ ಹೆಗಲೇರಿಸಿದರೆ ಆಗ ನೋಡಿ ತೋಳ್ಪ್ಪಾಡಿತ್ತಾಯರಿಗೊಂದು ಹುರುಪು. ಇದೆಲ್ಲಾ ಗುಣಗಳು ಯುವ ಮದ್ದಳೆವಾದಕರು ಗಮನಿಸಬೇಕಾದದ್ದು.
ಪ್ರಸ್ತುತ ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸುವ ಸಂಸ್ಥೆಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಕಾರಣದಿಂದ ಯಾವತ್ತೂ ಯಕ್ಷಗಾನ ರಂಗದಲ್ಲಿ ಕಾಣಿಸಿಕೊಳ್ಳಲಾಗುತ್ತಿಲ್ಲ. ಒಬ್ಬ ಉತ್ತಮ ಆಡಳಿತಗಾರನಾಗಿ ಧರ್ಮಸ್ಥಳದ ಖಾವಂದರ ಪ್ರೀತಿಗೆ ಪಾತ್ರರಾದವರು. ಕಲೆ ಸಂಸ್ಕೃತಿಗಳಿಗೆ ಯಾವತ್ತೂ ಪ್ರೋತ್ಸಾಹವನ್ನಿತ್ತವರು. ಅನೇಕ ಪ್ರಶಸ್ತಿಗಳಿಗೆ ಭಾಜನರಾದವರು. ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರು ಹಿಮ್ಮೇಳಕ್ಕೆ ಇದ್ದಾರೆಂದರೆ ಮುಮ್ಮೇಳ ಕಲಾವಿದರಿಗೆ ಒಬ್ಬ ಘನ ರಸಿಕ ಸಿಕ್ಕನೆಂದೇ ಅರ್ಥ. ಸೂಕ್ಷ್ಮ ದೃಷ್ಟಿಯ ಆಳವಾದ ನೋಟವುಳ್ಳ ಸಹೃದಯಿ ಕಲಾವಿದ-ರಸಜ್ಞ.
ಮನೆಯಲ್ಲೂ ಸಾಂಸ್ಕೃತಿಕ ವಾತಾವರಣವೇ. ಅವರ ಶ್ರೀಮತಿ ಮನೋರಮಾ ಶಾಸ್ತ್ರೀಯ ಸಂಗೀತ ವಿದುಷಿ. ಮಾತ್ರವಲ್ಲ ಯಕ್ಷಗಾನ ಭಾಗವತಿಕೆಯನ್ನೂ ಮಾಡಬಲವಲ್ಲವರು. ಭಾಗವತಿಕೆ -ಚೆಂಡೆ ಮದ್ದಳೆ ಎಂಬುದು ದಾಂಪತ್ಯದಂತೆ ಎನ್ನುತ್ತಾರೆ. ಅದೇ ತೆರನಾದ ಆದರ್ಶ ದಾಂಪತ್ಯ ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯ ಮತ್ತು ಶ್ರೀಮತಿ ಮನೋರಮಾ ಇವರದು. ಶ್ರೀಮತಿ ಮನೋರಮಾ ವೃತ್ತಿಯಲ್ಲಿ ಅಧ್ಯಾಪಕಿ. ಇವರು ತೆಂಕು- ಬಡಗು ಎರಡೂ ತಿಟ್ಟಿನ ಯಕ್ಚಗಾನ ನಾಟ್ಯವನ್ನೂ ಕಲಿತಿದ್ದಾರೆ. ಅನೇಕ ವೇಷಗಳನ್ನು ಮಾಡಿಯೂ ಇದ್ದಾರೆ. ಶ್ರೀ ತೋಳ್ಪ್ಪಾಡಿತ್ತಾಯರ ತಮ್ಮಂದಿರು ಶ್ರೀ ಜನಾರ್ದನ ತೋಳ್ಪ್ಪಾಡಿತ್ತಾಯ ಮತ್ತು ಶ್ರೀ ಸತೀಶ ತೋಳ್ಪ್ಪಾಡಿತ್ತಾಯ ಇವರಿಬ್ಬರೂ ಹಿಮ್ಮೇಳವಾದಕರು. ಅದರಲ್ಲೂ ಶ್ರೀ ಜನಾರ್ದನ ತೋಳ್ಪ್ಪಾಡಿತ್ತಾಯರು ಚೆಂಡೆ ಮದ್ದಳೆ ವಾದನದಲ್ಲಿ ಪ್ರಸಿದ್ದರು.
ಲೇಖನ : ಕೃಷ್ಣಪ್ರಕಾಶ ಉಳಿತ್ತಾಯ