ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ವಿಶ್ವ ಭೂ ದಿನಾಚರಣೆ –ಕಹಳೆ ನ್ಯೂಸ್
ಮಂಗಳೂರು : ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಇತ್ತೀಚೆಗೆ ವಿಶ್ಚ ಭೂ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಪ್ರಾಂಶುಪಾಲೆ ಡಾ. ಅನಸೂಯ ರೈ ಕಾಲೇಜಿನ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಭೂ ದಿನ ಆಚರಣೆಗೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಪ್ರಾಂಶುಪಾಲರು, ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಲು ಮತ್ತು ಅದರ ಅಗತ್ಯವನ್ನು ಮನಗಾಣಲು ಈ ದಿನ ಪ್ರೇರಣೆ ನೀಡುತ್ತದೆ, ಎಂದರಲ್ಲದೆ ಕಾಲೇಜಿನಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸುವಂತೆ ಕರೆ ನೀಡಿದರು.
ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಕುಮಾರಸ್ವಾಮಿ, ಈ ದಿನ 1970 ರಲ್ಲಿ ಆಧುನಿಕ ಪರಿಸರ ಚಳವಳಿಯ ಜನ್ಮ ವರ್ಷಾಚರಣೆಯನ್ನು ಸೂಚಿಸುತ್ತದೆ ಎಂದು ಭೂ ದಿನದ ಮಹತ್ವ ವಿವರಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ. ಗಾಯತ್ರಿ, ಕೊವಿಡ್ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೂ ಮಹತ್ವ ನೀಡಬೇಕು, ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ, ಸ್ನಾತಕೋತ್ತರ ಅರ್ಥಶಾಸ್ತ್ರ ಸಂಯೋಜಕ ಡಾ. ಜಯವಂತ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ್ ವಂದನಾರ್ಪಣೆಗೈದರು.