ಮಂಗಳೂರು : ಬೈಕ್ಗೆ ನಾಯಿಯನ್ನು ಕಟ್ಟಿ ಅಮಾನವೀಯತೆಯಿಂದ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ನೀಲಪ್ಪ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಮಾಹಿತಿ ಕಲೆ ಹಾಕಿರುವ ಪೊಲೀಸರು ಶೀಘ್ರ ಬಂಧಿಸುವ ಸಾಧ್ಯತೆ ಇದೆ. ಈ ಘಟನೆ ಮಂಗಳೂರು ನಗರ ಹೊರವಲಯದ ಸುರತ್ಕಲ್ ಸಮೀಪದ ಎನ್ಐಟಿಕೆ ರಾ.ಹೆ.ಯಲ್ಲಿ ನಡೆದಿತ್ತು. ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದ ಈ ದೃಶ್ಯವನ್ನು ಹಿಂದೆ ಬರುತ್ತಿದ್ದ ಬೈಕ್ ಸವಾರರು ಚಿತ್ರೀಕರಿಸಿ ಅನಿಮಲ್ ಕೇರ್ ಟ್ರಸ್ಟ್ ಜೊತೆ ಹಂಚಿಕೊಂಡಿದ್ದರು. ಅದರಂತೆ ಈ ಕುರಿತು ಸುರತ್ಕಲ್ ಠಾಣೆಗೆ ದೂರು ನೀಡಲಾಗಿತ್ತು.
ಎ. 15ರಂದು ರಾತ್ರಿ ಸುಮಾರು 8:30 ಕ್ಕೆ ಬೈಕ್ನ ಹಿಂದೆ ಹಗ್ಗದಲ್ಲಿ ನಾಯಿಯನ್ನು ಕಟ್ಟಿ ಇಬ್ಬರು ವೇಗವಾಗಿ ಸಾಗುತ್ತಿದ್ದರು. ಅದರ ಹಿಂದೆಯೇ ಇನ್ನೊಂದು ಶ್ವಾನ ಕೂಡ ಸ್ವಲ್ಪ ದೂರ ಓಡೋಡಿ ಬಂದಿದೆ. ಚಿತ್ರೀಕರಿಸಿದವರು ಹೈವೇಯಲ್ಲಿದ್ದರೆ ದುಷ್ಕರ್ಮಿಗಳು ಸರ್ವೀಸ್ ರಸ್ತೆಯಲ್ಲಿದ್ದರು.