ಮತ್ತೆ ಅಪಾಯದಲ್ಲಿದೆ ಮಡಿಕೇರಿ – ಮಂಗಳೂರು ಹೈವೇ ; ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ – ಕಹಳೆ ನ್ಯೂಸ್
ಮಡಿಕೇರಿ: ಮೈಸೂರು – ಬಂಟ್ವಾಳ ರಾಷ್ಟ್ರೀಯ ರಸ್ತೆ ಮಾರ್ಗದಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡುಪಾಲ ಸಮೀಪ ಇರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬಂದಿದ್ದು, ಇದು ಇನ್ನಷ್ಟು ಅಪಾಯಕಾರಿಯಾಗುವ ಸಂಭವ ಇದೆ.
ಇತ್ತೀಚೆಗೆ ಸುರಿದ ಮಳೆಯ ಪರಿಣಾಮದಿಂದ ಕೆಳ ಭಾಗದಿಂದ ರಸ್ತೆ ಕುಸಿತಕ್ಕೆ ಒಳಗಾಗುತ್ತಿದೆ. ನಿರಂತರವಾಗಿ ಭಾರೀ ವಾಹನಗಳು ಸಂಚಾರ ಮುಂದುವರಿಸಿದಲ್ಲಿ ಹಾಗೂ ಮತ್ತೆ ಮಳೆ ಬಂದಲ್ಲಿ ಈ ರಸ್ತೆ ಸಂಪೂರ್ಣ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.
ಈ ಹಿಂದೆ ಮಳೆಗಾಲದ ಸಮಯದಲ್ಲಿ ರಸ್ತೆ ಹಾಳಾಗಿದ್ದು, ಇದನ್ನು ಸರಿಪಡಿಸಲಾಗುತ್ತಿತ್ತು. ಇದರ ನಡುವೆಯೇ ರಸ್ತೆ ಕೆಳಭಾಗದಿಂದ ಕುಸಿತಕ್ಕೆ ಒಳಗಾಗುತ್ತಿದೆ. ಮತ್ತೆ ಮಳೆ ಬಂದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ಸ್ಥಳಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಸ್ತೆ ಬದಿ ನಿರ್ಮಾಣ ಮಾಡಲಾಗಿರುವ ಚರಂಡಿ ಬಳಿ ಮಣ್ಣು ಕುಸಿದಿದ್ದು, ರಸ್ತೆಯ ಮೇಲೆ ನೀರು ಹೋಗುತ್ತಿದೆ. ಆದ್ದರಿಂದ ತಕ್ಷಣ ರಸ್ತೆ ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಅವರಿಗೆ ಸೂಚಿಸಿದ್ದಾರೆ.
ಹೆದ್ದಾರಿ ಬಳಿ ಮತ್ತಷ್ಟು ಸಿಪೇಜ್ ಆಗುವುದು ಕಂಡುಬಂದಲ್ಲಿ ತಾತ್ಕಾಲಿಕವಾಗಿ ಬದಲಿ ಸಂಚಾರ ಮಾರ್ಗ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಹಾಗೆಯೇ ಬೃಹತ್ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಪ್ರತಿಕ್ರಿಯಿಸಿ, ಭಾರೀ ವಾಹನಗಳಿಗೆ ರಸ್ತೆಯಲ್ಲಿ ಸಂಚಾರ ನಡೆಸುವುದು ನಿಷೇಧ ಹೇರಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಬದಲಿ ರಸ್ತೆ ಮಾರ್ಗದ ಬಗ್ಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.