ಬಡ ಯಕ್ಷಗಾನ ಕಲಾವಿದರಿಗೆ ಉಚಿತ ರೇಷನ್ ; ಯಕ್ಷಧ್ರುವ ಪಟ್ಲ ಫೌಂಡೇಶನ್ ಘೋಷಣೆ – ಕಹಳೆ ನ್ಯೂಸ್
ಮಂಗಳೂರು: ಯಕ್ಷಗಾನ ಕರಾವಳಿಯ ಪ್ರಮುಖ ಜಾನಪದ ಕಲೆ. ಯಕ್ಷಗಾನವನ್ನು ನಂಬಿಕೊಂಡು ಸಾವಿರಾರು ಕಲಾವಿದರು ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ತತ್ತರಿಸಿದ ಯಕ್ಷಗಾನ ಕಲಾವಿದರು ಈ ಬಾರಿಯೂ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದಾರೆ. ಅಂತವರ ನೆರವಿಗೆ ಮುಂದಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಚಿತ ರೇಷನ್ ವಿತರಣೆಯ ಘೋಷಣೆ ಮಾಡಿದೆ.
ಲಾಕ್‍ಡೌನ್‍ನಿಂದ ಮೇಳದ ತಿರುಗಾಟವಿಲ್ಲದೆ ಮತ್ತು ಮುಂದಿನ 4-5 ತಿಂಗಳು ಯಾವ ಕಾರ್ಯಕ್ರಮವೂ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರ ಈ ಸ್ಥಿತಿಯನ್ನು ಮನಗಂಡು ಕಳೆದ ವರ್ಷದಂತೆ ಈ ಬಾರಿಯೂ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ರೇಷನ್ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.
ಅತೀ ಅವಶ್ಯಕತೆ ಇರುವ ಯಕ್ಷಗಾನ ವೃತ್ತಿ ಕಲಾವಿದರು ಟ್ರಸ್ಟ್ ನ ಘಟಕದ ಪದಾಧಿಕಾರಿಗಳನ್ನು ಮೇ 10ರೊಳಗೆ ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಮತ್ತು ಮೇಳದ ಹೆಸರನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 91645 21588 ಮತ್ತು 74111 61662 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಕಟನೆ ತಿಳಿಸಿದೆ.