Sunday, January 19, 2025
ಕಾಸರಗೋಡುಮಂಜೇಶ್ವರಸುದ್ದಿ

ನಾಳೆ ಹೊರಬೀಳಲಿದೆ ಕೇರಳ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ; ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಮತ್ತು ಕಾಸರಗೋಡಿನಲ್ಲಿ ಕೆ. ಶ್ರೀಕಾಂತ್ ಗೆಲುವು ಬಹುತೇಕ ಖಚಿತ – ಕಹಳೆ ನ್ಯೂಸ್

ಕಾಸರಗೋಡು, ಮೇ 01  : ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಸಂಜೆಯೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ. ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ನಡೆಯಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಜೇಶ್ವರ – ಕುಂಬಳೆ ಹಯರ್ ಸೆಕಂಡರಿ ಶಾಲೆ, ಕಾಸರಗೋಡು – ಕಾಸರಗೋಡು ಸರಕಾರಿ ಕಾಲೇಜು, ಉದುಮ – ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾಞಂಗಾಡ್ – ನೆಹರೂ ಕಾಲೇಜು ಪಡನ್ನಕಾಡ್‌, ತೃಕ್ಕರಿಪುರ – ತೃಕ್ಕರಿಪುರ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಅಂಚೆ ಮತಗಳನ್ನು ಬೆಳಿಗ್ಗೆ ಎಣಿಕೆ ಮಾಡಲಾಗುವುದು. ಈ ಬಾರಿ ಅಂಚೆ ಮತಗಳ ಸಂಖ್ಯೆ ಹೆಚ್ಚಿರುವುದು ಎಲೆಕ್ಟ್ರಾನಿಕ್ ಮತಯಂತ್ರಗಳ ಎಣಿಕೆ ವಿಳಂಬವಾಗುವ ಸಾಧ್ಯತೆ ಇದ್ದು, 9 ಗಂಟೆ ಸುಮಾರಿಗೆ ಮೊದಲ ಸುತ್ತಿನ ಫಲಿತಾಂಶ ಲಭಿಸುವ ಸಾಧ್ಯತೆ ಇದೆ. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ತಲಾ ಎರಡೂ ವರೆ ಸಾವಿರ, ಉದುಮ, ಕಾಞಂಗಾಡ್‌ನಲ್ಲಿ ತಲಾ ನಾಲ್ಕು ಸಾವಿರ ಹಾಗೂ ತೃಕ್ಕರಿಪುರಲ್ಲಿ ಆರು ಸಾವಿರದರಷ್ಟು ಅಂಚೆ ಮತಗಳಿವೆ. ಪೂರ್ಣ ಫಲಿತಾಂಶ ಈ ಬಾರಿ ವಿಳಂಬಗೊಳ್ಳಲಿದ್ದು, ಸಂಜೆ ಮೂರು ಗಂಟೆ ಬಳಿಕವಷ್ಟೇ ಅಂತಿಮ ಚಿತ್ರಣ ಹೊರಬೀಳಲಿದೆ.

ಕೋವಿಡ್ ಮಾನದಂಡ ಪಾಲಿಸಿ ಮತ ಎಣಿಕೆ ಮಾಡುವುದರಿಂದ ಹಾಗೂ ಅಂಚೆ ಮತಗಳ ಸಂಖ್ಯೆ ಹೆಚ್ಚಿರುವುದರಿಂದ ಫಲಿತಾಂಶ ವಿಳಂಬಗೊಳ್ಳಲಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಂದು ಸುತ್ತಿನಲ್ಲಿ 20 ಮತಗಟ್ಟೆಗಳ ಮತಗಳನ್ನು ಎಣಿಕೆ ಮಾಡಲಾಗುವುದು. ಮಂಜೇಶ್ವರದಲ್ಲಿ 336 ಮತಗಟ್ಟೆಗಳಿದ್ದು, 17 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಕಾಸರಗೋಡು 296 ಮತಗಟ್ಟೆ 15 ಸುತ್ತು, ಉದುಮ 316 ಮತಗಟ್ಟೆ 16 ಸುತ್ತು, ಕಾಞಂಗಾಡ್‌ನಲ್ಲಿ 336 ಮತಗಟ್ಟೆಗಳ 17 ಹಾಗೂ ತೃಕ್ಕರಿಪುರ ಕ್ಷೇತ್ರದ 307 ಮತಗಟ್ಟೆಗಳಿದ್ದು, 16 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತಗಟ್ಟೆ ಪ್ರವೇಶಕ್ಕೆ ಗುರುತು ಚೀಟಿ ಜೊತೆ ಕೋವಿಡ್ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ.

ವಿಜಯೋತ್ಸವಕ್ಕೆ ಅವಕಾಶ ಇಲ್ಲ

ವಿಜಯೋತ್ಸವನ್ನು ಚುನಾವಣಾ ಆಯೋಗ ನಿಷೇಧಿಸಿದ್ದು, ಯಾವುದೇ ರೀತಿಯ ವಿಜಯೋತ್ಸವ ನಡೆಸದಂತೆ ತಿಳಿಸಿದೆ. ಮತ ಎಣಿಕಾ ಸ್ಥಳದಲ್ಲಿ ಗುಂಪು ಗೂಡುವುದು ಹಾಗೂ ಪ್ರವೇಶ ನಿಷೇಧಿಸಿದೆ. ಉಲ್ಲಂಘಿಸುವವರ ವಿರುದ್ಧ ಕೋವಿಡ್ ಮಾನದಂಡ ಉಲ್ಲಂಘನೆ ಮೊಕದ್ದಮೆ ಹೂಡಲಾಗುವುದು.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದ್ದು, ಮಂಜೇಶ್ವರ ಮತ್ತು ಉದುಮ ಕ್ಷೇತ್ರ ಎಲ್ಲರ ಕೇಂದ್ರ ಬಿಂದುವಾಗಿದೆ. ಮಂಜೇಶ್ವರದಲ್ಲಿ ಯುಡಿಎಫ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದ್ದು, ಕಳೆದ ಬಾರಿ ಕೇವಲ 89 ಮತಗಳ ಅಂತರದಿಂದ ಸೋಲು ಕಂಡಿದ್ದ ಬಿಜೆಪಿಯ ಕೆ. ಸುರೇಂದ್ರನ್ ಈ ಬಾರಿ ಕಣದಲ್ಲಿದ್ದು, ಯುಡಿಎಫ್‌ನಿಂದ ಸ್ಥಳೀಯ ಮುಖಂಡ ಎ. ಕೆ ಎಂ ಅಶ್ರಫ್‌ ಕಣದಲ್ಲಿದ್ದಾರೆ. ಈ ಎರಡೂ ಪಕ್ಷಗಳನ್ನು ಹಿಂದಿಕ್ಕಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ ಎಲ್‌ಡಿಎಫ್‌ ನ ಅಭ್ಯರ್ಥಿ ವಿ. ವಿ ರಮೇಶನ್‌. ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳಲ್ಲಿ 2016 ಕ್ಕಿಂತ ಮತದಾನ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಮೂರು ಪಕ್ಷಗಳಿಗೆ ಗೆಲುವಿನ ನಿರೀಕ್ಷೆಯಲ್ಲಿದೆ.

ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್‌ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ನಡೆಯುತ್ತಿದ್ದು ಹಾಲಿ ಶಾಸಕ ಎನ್‌. ಎ ನೆಲ್ಲಿಕುನ್ನು ಹಾಗೂ ಬಿಜೆಪಿಯಿಂದ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಸ್ಪರ್ಧೆ ನೀಡುತ್ತಿದ್ದು, ಮತದಾನ ಪ್ರಮಾಣ ಕುಸಿದಿರುವುದು ಯುಡಿಎಫ್‌ನಲ್ಲಿ ಆತಂಕ ಆರಂಭವಾಗಿದೆ. ಕಳೆದ ಬಾರಿಗಿಂದ ಆರು ಶೇಕಡಾದಷ್ಟು ಮತಗಳು ಇಳಿಕೆಯಾಗಿದ್ದು, ಯುಡಿಎಫ್‌ ಬೆಂಬಲಿತ ಪ್ರದ್ರೇಶಗಳಲ್ಲಿ ಮತದಾನದ ಪ್ರಮಾಣ ಕುಸಿದಿದೆ. ಎಲ್‌ಡಿಎಫ್‌ನಿಂದ ಎಂ. ಎ ಲತೀಫ್ ಕಣದಲ್ಲಿದ್ದಾರೆ.

ಎಲ್‌ಡಿಎಫ್‌ನ ಭದ್ರಕೋಟೆಯಾಗಲಿರುವ ಉದುಮದಲ್ಲಿ ಮಾಜಿ ಶಾಸಕ ಸಿ. ಎಚ್ ಕುಂಞಂಬು ಕಣದಲ್ಲಿದ್ದು, ಯುಡಿಎಫ್‌ನಿಂದ ಬಾಲಕೃಷ್ಣ ಪೆರಿಯ ಕಣದಲ್ಲಿದ್ದು, ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ವೇಲಾಯುಧನ್ ಕಣದಲ್ಲಿದ್ದಾರೆ.

ಕಾಞಂಗಾಡ್‌ನಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪೈಪೋಟಿ ನಡೆಸುತ್ತಿದ್ದು, ಎಲ್‌ಡಿಎಫ್‌ನಿಂದ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌, ಯುಡಿಎಫ್‌ನಿಂದ ಪಿ.ವಿ ಸುರೇಶ ಮತ್ತು ಬಿಜೆಪಿಯಿಂದ ಬಲರಾಜ್ ಕಣದಲ್ಲಿದ್ದಾರೆ .

ತ್ರಿಕ್ಕರಿಪುರದಲ್ಲಿ ಎಲ್‌ಡಿಎಫ್‌ನಿಂದ ಹಾಲಿ ಶಾಸಕ ಎಂ. ರಾಜಗೋಪಾಲ್ ಕಣದಲ್ಲಿದ್ದು, ಯುಡಿಎಫ್‌ನಿಂದ ಎಂ.ಪಿ ಜೋಸೆಫ್ ಹಾಗೂ ಬಿಜೆಪಿಯಿಂದ ಟಿ. ವಿ ಶಿಬಿನ್ ಕಣದಲ್ಲಿದ್ದಾರೆ.