‘ದ್ವಿತೀಯ ಪಿಯುಸಿ’ ವಾರ್ಷಿಕ ಪರೀಕ್ಷೆ ಮುಂದೂಡಿಕೆ, ‘ಪ್ರಥಮ ಪಿಯುಸಿ ವಿದ್ಯಾರ್ಥಿ’ಗಳು ಪರೀಕ್ಷೆ ಇಲ್ಲದೇ ಪಾಸ್ -‘ಪದವಿ ಪೂರ್ವ ಶಿಕ್ಷಣ ಇಲಾಖೆ’ ಅಧಿಕೃತ ಆದೇಶ-ಕಹಳೆ ನ್ಯೂಸ್
ಬೆಂಗಳೂರು : ರಾಜ್ಯಾಧ್ಯಂತ ಕೋವಿಡ್-19ರ ಪ್ರಕರಣಗಳು ನಿರತಂರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, 2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರಥಮ ಪಿಯುಸಿ ಎಲ್ಲಾ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆ ಮಾಡಲಾಗಿದೆ ಎಂಬುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ರಾಜ್ಯಾಧ್ಯಂತ ಕೋವಿಡ್-19ರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಯನ್ನು ನಡೆಸುವ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಅಪರ ಮಉಖ್ಯ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮತ್ತು ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಉಪಸ್ಥಿತಿಯಲ್ಲಿ ದಿನಾಂಕ 04-05-2021ರಂದು ಸಭಎ ನಡೆಸಲಾಯಿತು. ಸದರಿ ಸಭೆಯ ತೀರ್ಮಾನದಂತೆ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು
ಪದವಿ ಪೂರ್ವ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 24-05-2021 ರಿಂದ 16-06-2021ರವರೆಗೆ ನಡೆಸಲು ತೀರ್ಮಾನಿಸಿ ಸುತ್ತೋಲೆಯ ಮೂಲಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಆದ್ರೇ ರಾಜ್ಯದಲ್ಲಿ ಕೋವಿಡ್-19ರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಸದರಿ ಕಾರ್ಯದಲ್ಲಿ ನಿರತರಾಗಿರುತ್ತಾರೆ. ನಮ್ಮ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹ ಕೋವಿಡ್-19ರ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಕೋವಿಡ್ ಪರಿಸ್ಥಿತಿಗಳಲ್ಲಿ ವಿದ್ಯಾರ್ಥಿಗಳ ಕ್ಷೇಮ ಮುಖ್ಯವಾಗಿದ್ದು, ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳ ಆರೋಗ್ಯಕ್ಕೆ ಸೂಕ್ತವಲ್ಲವೆಂದು ಅಭಿಪ್ರಾಯಿಸಲಾಯಿತು. ಇದಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಲವಾರು ಸಂಘ-ಸಂಸ್ಥೆಗಳಿಂದ ಮನವಿ ಸ್ವೀಕೃತವಾಗಿರುತ್ತವೆ.
ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಠಿಯಿಂದ ಇಲಾಖೆಯು ದಿನಾಂಕ 24-05-2021ರಂದು ಪ್ರಾರಂಭಿಸಬೇಕಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆಯನ್ನು ನಡೆಸಲು ನಿಗದಿಪಡಿಸುವ ದಿನಾಂಕಕ್ಕೆ 15 ದಿನಗಳ ಮುಂಚಿತವಾಗಿ ಪ್ರಕಟಿಸಲಾಗುವುದು.
ಪ್ರಥಮ ಪಿಯುಸಿ ಪರೀಕ್ಷೆ ಕುರಿತು
2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆ ಎಂದು ಪರಿಗಣಿಸುವುದು. ಸದರಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿಯಲ್ಲಿ ಶೇ.30ರಷ್ಟು ಕಡಿತಗೊಳಿಸಿದ ಪಠ್ಯಕ್ರಮವನ್ನು ಸೇತು ಬಂಧ ತರಗತಿಗಳನ್ನಾಗಿ ನಡೆಸುವುದು. ಈ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.
ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಕರ್ತವ್ಯ
ಪ್ರಸ್ತುತ ಕೋವಿಡ್-19ರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಮನೆಯಿಂದಲೇ ಕೆಲಸ ನಿರ್ವಹಿಸುವುದು. ಅವಶ್ಯವಿದ್ದಲ್ಲಿ ಮಾತ್ರ ಕಾಲೇಜಿಗೆ ಪ್ರಾಂಶುಪಾಲರ ನಿರ್ದೇಶನದ ಮೇರೆಗೆ ಆಗಮಿಸಿ, ಕರ್ತವ್ಯ ನಿರ್ವಹಿಸುವುದು. ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೂರವಾಣಿ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಮಾರ್ಗದರ್ಶನ ನೀಡುವುದು ಹಾಗೂ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಂಶಗಳನ್ನು ಪರಿಹರಿಸುವುದು ಎಂದು ಸುತ್ತೋಲಿಯಲ್ಲಿ ತಿಳಿಸಿದ್ದಾರೆ.