Recent Posts

Sunday, January 19, 2025
ರಾಜಕೀಯ

ಸಚಿವ ರಮಾನಾಥ ರೈ ಬಳಿಯಲ್ಲಿದೆ 2 ಕೆಜಿಗೂ ಅಧಿಕ ಚಿನ್ನ ;6.25 ಕೋಟಿ ರೂ ಆಸ್ತಿ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗಿಂತ ಅವರ ಪತ್ನಿಯೇ ಸಿರಿವಂತೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಮಾನಾಥ ರೈ ಚುನಾವಣಾ ಆಯೋಗಕ್ಕೆ ಘೋಷಣೆ ಮಾಡಿರುವ ತಮ್ಮ ಆದಾಯ ವಿವರಗಳಲ್ಲಿ ಇಂತಹದ್ದೊಂದು ಮಾಹಿತಿ ತೆರೆದಿಟ್ಟಿದ್ದಾರೆ. ರಮಾನಾಥ ರೈ ಅವರು ತಮ್ಮ ಕುಟುಂಬದ ಒಟ್ಟು ಆಸ್ತಿ ಮೊತ್ತ 6.25 ಕೋಟಿ ರೂಪಾಯಿ ಎಂದು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.

ಈ ಪೈಕಿ ಕುಟುಂಬದ ಒಟ್ಟು ಚರಾಸ್ತಿ ಮೊತ್ತವು 1.96 ಕೋಟಿ ರೂಪಾಯಿ ಹಾಗೂ ಸ್ಥಿರಾಸ್ತಿ 4.29 ಕೋಟಿ ರೂಪಾಯಿ ಆಗಿದೆ. ರಮಾನಾಥ ರೈ ಅವರು 2 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 53 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 3.96 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ಧನಭಾಗ್ಯ ರೈ 1.90 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 86.63 ಲಕ್ಷ ರೂಪಾಯಿ ಚರಾಸ್ತಿ ಹಾಗೂ 12 ಲಕ್ಷ ರೂಪಾಯಿಯ ಸ್ಥಿರಾಸ್ತಿ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಚಿವ ರೈ ಅವರ ಚರಾಸ್ತಿಯ ಪ್ರಮಾಣವನ್ನು ಗಮನಿಸಿದಾಗ ಪತ್ನಿಯೇ ಹೆಚ್ಚು ಮೌಲ್ಯದ ಆಸ್ತಿ ಹೊಂದುವ ಮೂಲಕ ಶ್ರೀಮಂತರಾಗಿರುವುದು ಕಂಡು ಬರುತ್ತದೆ. ಇನ್ನು ಪುತ್ರಿ ಬಳಿಯಲ್ಲಿ 1.80 ಲಕ್ಷ ರೂಪಾಯಿ ನಗದು ಸೇರಿದಂತೆ 34.17 ಲಕ್ಷ ರೂಪಾಯಿ ಚರಾಸ್ತಿ ಮತ್ತು ಪುತ್ರನ ಬಳಿ 90 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 21.82 ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇನ್ನು ಪುತ್ರಿಯ ಹೆಸರಿನಲ್ಲಿ ಮಾತ್ರ 21 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ಸಾಲದ ವಿಚಾರದಲ್ಲಿ ರಮಾನಾಥ ರೈ ಒಟ್ಟು 34.59 ಲಕ್ಷ ರೂಪಾಯಿ ಸಾಲವನ್ನು ವಿವಿಧ ಬ್ಯಾಂಕ್ ಹಾಗೂ ಇತರೆಡೆಗಳಲ್ಲಿ ಹೊಂದಿದ್ದಾರೆ. ಪುತ್ರಿಯ ಹೆಸರಿನಲ್ಲಿ 37.89 ಲಕ್ಷ ರೂಪಾಯಿ ಸಾಲ ಇದೆ. ಪತ್ನಿ ಮತ್ತು ಮಗನ ಹೆಸರಿನಲ್ಲಿ ಯಾವುದೇ ಸಾಲ ಇಲ್ಲ. 2 ಕೆ.ಜಿ. ಗೂ ಅಧಿಕ ಚಿನ್ನ ರಮಾನಾಥ ರೈ ಅವರ ಘೋಷಣೆ ಪ್ರಕಾರ ಅವರ ಕುಟುಂಬದ ಬಳಿ ಸುಮಾರು 2ಕೆಜಿಗೂ ಅಧಿಕ ತೂಕದ ಚಿನ್ನ ಇದೆ. ರಮಾನಾಥ ರೈ ಅವರ ಹೆಸರಿನಲ್ಲಿ 100 ಗ್ರಾಂ ಚಿನ್ನ ಹಾಗೂ ಪತ್ನಿ ಹೆಸರಿನಲ್ಲಿ 1 ಕೆಜಿ 400 ಗ್ರಾಂ ಹಾಗೂ ಮಕ್ಕಳ ಹೆಸರಿನಲ್ಲಿ 500 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಸಚಿವ ರಮಾನಾಥ ರೈ ಬಳಿ ಇನ್ನೋವಾ, ಟಾಟಾ ಕಂಪೆನಿಯ ಕಾರು, ಪುತ್ರಿಯ ಹೆಸರಿನಲ್ಲಿ ಟಾಟಾ 407, ಮಹೀಂದ್ರಾ ಪಿಕಪ್ ಮಾದರಿ ವಾಹನಗಳಿವೆ. ರೈ ಅವರಿಗೆ ಕೃಷಿ ಹಾಗೂ ಕೃಷಿಯೇತರ ಮೂಲಗಳಿಂದ ಪ್ರತೀ ವರ್ಷ ಒಟ್ಟು 72.65 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಪತ್ನಿಗೆ ಕೃಷಿ ಹಾಗೂ ಕೃಷಿಯೇತರ ಮೂಲಗಳಿಂದ 10.35 ಲಕ್ಷ ರೂಪಾಯಿ ಆದಾಯ ಬರುವುದಾಗಿ ಘೋಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು