Recent Posts

Friday, November 22, 2024
ಸುದ್ದಿ

ತೌಕ್ತೆ ಚಂಡಮಾರುತದಿಂದ ಭಾರೀ ಮಳೆ; ಕರಾವಳಿ, ಮಲೆನಾಡಿನಲ್ಲಿ ನಾಳೆ ರೆಡ್ ಅಲರ್ಟ್ ಘೋಷಣೆ-ಕಹಳೆ ನ್ಯೂಸ್

ಇನ್ನೇನು ಮಳೆಗಾಲ ಶುರುವಾಗಲಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದೊಂದು ವಾರಗಳಿಂದ ಮಳೆಯಾಗುತ್ತಿದೆ. ಮೇ 16ರವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮೇ 15 ಮತ್ತು 16ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇ 16ರಂದು ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದಿನಿಂದ ಮೂರು ದಿನ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಳೆ ದಕ್ಷಿಣ ಭಾರತಕ್ಕೆ ತೌಕ್ತೆ ಚಂಡಮಾರುತ ಆಗಮನವಾಗಲಿದೆ. ಇಂದಿನಿಂದ ಮೂರು ದಿನ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಇಂದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೇ 17ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು, ನಾಳೆ ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಮೇ 16ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೇ 16ರಂದು ಅರಬ್ಬಿ ಸಮುದ್ರದಲ್ಲಿ ಈ ವರ್ಷದ ಮೊದಲ ಚಂಡಮಾರುತ ಅಪ್ಪಳಿಸಲಿದ್ದು, ಇದಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಡಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಂಡಮಾರುತ ಅಬ್ಬರಿಸಲಿದೆ. ಹೀಗಾಗಿ, ಮುಂದಿನ 1 ವಾರಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ನಾಳೆ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ತೌಕ್ತೆ ಚಂಡಮಾರುತ ಅಬ್ಬರ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಮೇ 16ರಂದು ಗಂಟೆಗೆ 40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.

ಕೊಡಗಿನಲ್ಲಿ ಇಂದಿನಿಂದ 2 ದಿನ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಮತ್ತು ಇಂದಿರಾನಗರದ ನಿವಾಸಿಗಳು ತಾತ್ಕಾಲಿಕವಾಗಿ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಡಿಕೇರಿ ನಗರ ಸಭೆ ನೊಟೀಸ್ ನೀಡಿದೆ. ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದ 128ಕ್ಕೂ ಹೆಚ್ಚು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮೇ 14 ಮತ್ತು 15ರಂದು ಚಂಡಮಾರುತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ದೊರೆತಿದೆ. ಹೀಗಾಗಿ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೋಟಿಸ್ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಬ್ಬಿ ಸಮುದ್ರದ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿಯುವ ಹಿನ್ನೆಲೆಯಲ್ಲಿ ಮೇ 16ರಂದು ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸಲಿದೆ. ತೌಕ್ತೆ ಚಂಡಮಾರುತ ಎಂಬುದು ಮಯನ್ಮಾರ್ ಹೆಸರಾಗಿದೆ. ಲಕ್ಷದ್ವೀಪ, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಹೆಚ್ಚಾಗಿರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗಾವಿ, ಧಾರವಾಡ, ಹಾವೇರಿ, ಗದಗದ ಕೆಲವು ಭಾಗಗಳಲ್ಲಿ ಮೇ 15 ಮತ್ತು 17ರಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇ 15 ಮತ್ತು 16ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ,ಕೊಪ್ಪಳ, ವಿಜಯಪುರ ಹಾಗೂ ಬಾಗಲಕೋಟೆಯ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೇ 15 ಮತ್ತು 16 ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ , ಚಿಕ್ಕಮಗಳೂರು, ಹಾಸನ, ಹಾಗೂ ಕೊಡಗು ಜಿಲ್ಲೆಗಳ ಕೆಲವು ಕಡೆ ಇಂದು ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆ‌. ನಾಳೆ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 2 ದಿನಗಳಿಂದ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಲ್ಲಿ ಜೋರಾಗಿ ಮಳೆಯಾಗಿದ್ದು, ಕೊಡಗು, ಬೆಂಗಳೂರಿನಲ್ಲಿಯೂ ಮಳೆ ಸುರಿದಿದೆ. ಇಂದು ಕೂಡ ಈ ಭಾಗಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯವಾದ ಕೇರಳ, ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಇಂದು ಮಳೆ ಹೆಚ್ಚಾಗಲಿದೆ. ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.