ತೌಕ್ತೆ ಚಂಡಮಾರುತ ಎಫೆಕ್ಟ್ | ಉಡುಪಿ ಜಿಲ್ಲೆಯಾದ್ಯಂತ ಭಾರಿ ಅವಾಂತರ ; ಕೃಷಿಕ ಸಾವು – ಕಹಳೆ ನ್ಯೂಸ್
ಉಡುಪಿ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದಿಂದ ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಬಿದ್ದಿದೆ. ಹೀಗಾಗಿ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ.
ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಕೆಳಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಗೆ, ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ, 5 ತಾತ್ಕಾಲಿಕ ಶೆಡ್‍ಗಳಿಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ.
ಜಿಲ್ಲೆಯಾದ್ಯಂತ ಸುಮಾರು 50 ತೆಂಗಿನಮರಗಳಿಗೆ ಹಾನಿಯಾಗಿದ್ದು, ಮರಗಳು, ರೆಂಬೆ ಕೊಂಬೆ ಧರೆಗೆ ಉರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದದ ಆಗಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದ್ದು, ಕೂಡಲೇ ತೆರವುಗೊಳಿಸಲಾಯ್ತು. ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕುಂದಾಪುರ ತಾಲೂಕಿನ 7 ಕುಟುಂಬಗಳನ್ನು ಸಂಬಂಧಿಕರ ಮನೆಗೆ, ಕಾಪು ತಾಲೂಕಿನ ಒಂದು ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಮಾರು 50 ರಿಂದ 60 ಜನಗಳಿಗೆ ಪರಿಸ್ಥಿತಿ ಅವಲೋಕಿಸಿ ಕೋಡಿ ಶಾಲೆಯಲ್ಲಿ ಆರಂಭಿಸಿದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಉಡುಪಿ ಕಾಪುವಿನಲ್ಲಿ ಈಗಾಗಲೇ ಸಮುದ್ರ ತೀರದ ಜನಗಳಿಗೆ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.