ತೌಕ್ತೆ ಚಂಡಮಾರುತದ ಎಚ್ಚರಿಕೆ ಮಧ್ಯೆಯೂ ದುರಂತಕ್ಕೀಡಾದ ಅರಬ್ಬೀ ಸಮುದ್ರಕ್ಕಿಳಿದ ದೋಣಿ ; 7 ಮಂದಿಗಾಗಿ ಮುಂದುವರಿದ ಶೋಧ ಕಾರ್ಯ – ಕಹಳೆ ನ್ಯೂಸ್
ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತ ಭಾರೀ ಪ್ರಮಾಣದಲ್ಲಿ ಅಪ್ಪಳಿಸುತ್ತಿದೆ. ಚಂಡಮಾರುತದ ಎಚ್ಚರಿಕೆ ಮಧ್ಯೆಯೂ ಅರಬ್ಬೀ ಸಮುದ್ರಕ್ಕಿಳಿದ ದೋಣಿ ದುರಂತಕ್ಕೀಡಾಗಿದೆ. ಮಂಗಳೂರಿನ ಎಂಆರ್ ಪಿಎಲ್ ಕಚ್ಛಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಬೋಟ್ 17 ನಾಟಿಕಲ್ ದೂರದಲ್ಲಿ ದುರಂತಕ್ಕೀಡಾಗಿ 7 ಮಂದಿ ನಾಪತ್ತೆಯಾಗಿದ್ದಾರೆ. ದೋಣಿ ಮಗುಚಿ ಟ್ಯೂಬ್ ನಲ್ಲಿ ಈಜಿ ಜೀವ ಉಳಿಸಿ ಕೊಂಡ ಇಬ್ಬರು ದಡ ಸೇರಿದ್ದಾರೆ. ಉಡುಪಿ ಜಿಲ್ಲೆಯ ಮಟ್ಟು ಕೊಪ್ಲ ಪರಿಸರದಲ್ಲಿ ಇಬ್ಬರು ದಡ ಸೇರಿದ್ದು, ಇನ್ನುಳಿದ ಏಳು ಜನರಿಗಾಗಿ ಆಳ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಹುಡುಕಾಟ ಆರಂಭಿಸಿದೆ.
ಮಂಗಳೂರಿನ ತೈಲ ಶುದ್ದೀಕರಣ ಘಟಕದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಟ್ ಇದಾಗಿದ್ದು, ಎಂಆರ್ ಪಿಎಲ್ ಗೆ ತೈಲ ಹೊತ್ತು ತರುವ ಹಡಗಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕಾರ್ಯ ಮಾಡುತ್ತಿದ್ದರು. ನಿನ್ನೆ ಸಂಜೆ ಮಂಗಳೂರಿನಿಂದ ಬೋಟ್ ನಲ್ಲಿ ಒಟ್ಟು ಒಂಭತ್ತು ಜನರು ತೆರಳಿದ್ದು, ಏಳು ಜನ ಸಮುದ್ರದಲ್ಲೇ ನಾಪತ್ತೆಯಾಗಿದ್ದಾರೆ. ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್ ಮಗುಚಿ ಬಿದ್ದಿದ್ದು,ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಕಡಲಿನಿಂದ ಬದುಕಿ ಬಂದಿದ್ದಾರೆ. ಚಂಡಮಾರುತದ ಎಚ್ಚರಿಕೆ ಇದ್ದರೂ ಮಂಗಳೂರಿನ ನವಮಂಗಳೂರು ಬಂದರಿನಿಂದ ಆಳ ಸಮುದ್ರಕ್ಕೆ ಈ ಬೋಟ್ ತೆರಳಿತ್ತು. ಅರಬ್ಬೀ ಸಮುದ್ರ ಅಬ್ಬರಿಸಿ ಬೊಬ್ಬರಿಯುತ್ತಿದ್ದು ,ಮನೆ-ರಸ್ತೆಗಳಿಗೆ ಸಮುದ್ರದ ನೀರು ನುಗ್ಗಿದೆ. ಮಂಗಳೂರು ಉಳ್ಳಾಲ ಸೋಮೇಶ್ವರ ಸುರತ್ಕಲ್ ಬೈಕಂಪಾಡಿ ಭಾಗಗಳಲ್ಲಿ ಕಡಲು ಭೂಪ್ರದೇಶವನ್ನು ಆಪೋಶನ ಪಡೆಯುತ್ತಿದ್ದು, ಸಮುದ್ರದ ಅಬ್ಬರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಕಡಲ ಅಬ್ಬರಕ್ಕೆ ಸೋಮೇಶ್ವರದ ಹಿಂದೂ ರುದ್ರಭೂಮಿಯ ಕಟ್ಟಡ ಸಮುದ್ರ ಪಾಲಾಗಿದೆ.ಕಡಲು ಕ್ಷಣ ಕ್ಷಣಕ್ಕೂ ಕೆರಳುತ್ತಿದ್ದು, ಕಡಲ ತೀರದಲ್ಲಿ ಕಟ್ಟಿಹಾಕಿದ್ದ ಮೀನುಗಾರಿಕಾ ಬೋಟ್ ಗಳಿಗೂ ಹಾನಿಯಾಗಿದೆ. ಈ ಹಿನ್ನಲೆಯಲ್ಲಿ ಮೀನುಗಾರರು ಕಡಲ ಅಬ್ಬರದ ನಡುವೆಯೂ ಬೋಟ್ ಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಾರೆ.
ಉಳ್ಳಾಲದ ಕಡಲತೀರದಲ್ಲೂ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಸುಮಾರು ಹತ್ತು ಅಡಿ ಎತ್ತರಕ್ಕೆ ಅಲೆಗಳು ಅಪ್ಪಳಿಸುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಉಳ್ಳಾಲದ ಮೊಗವೀರ ಪಟ್ಟಣದಲ್ಲಿ ಮನೆಗೆ ಸಮುದ್ರದ ನೀರು ನುಗ್ಗಿ ಮನೆಯ ಸಾಮಾಗ್ರಿಗಳೆಲ್ಲಾ ನೀರು ಪಾಲಾಗಿದೆ. ಸಮುದ್ರದ ನೀರು ಮನೆಯನ್ನು ಆವರಿಸಿದ್ದು ಕುಟುಂಬಸ್ಥರು ತತ್ತರಿಸಿದ್ದಾರೆ. ಸುರತ್ಕಲ್ನ ಸಸಿಹಿತ್ಲು ನಲ್ಲಿ ಬೀಚ್ ಬಳಿಯಿದ್ದ ವಾಣಿಜ್ಯ ಕಟ್ಟಡವೂ ಸಮುದ್ರಪಾಲಾಗಿದೆ. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆ ಕಡಲ ತೀರದ ಹತ್ತಕ್ಕೂ ಹೆಚ್ಚು ಕಟ್ಟಡಗಳು ಧರಾಶಾಹಿಯಾಗಿದೆ. ಉಳ್ಳಾಲ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಭೇಟಿ ನೀಡಿ ಪರಿಶೀಲಿಸಿದರು. ಚಂಡಮಾರುತದಿಂದ ಯಾವುದೇ ರೀತಿಯ ತೊಂದರೆ ಆದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಗೂ ಸುರಕ್ಷಿತವಾಗಿ ಇರುವಂತೆ ಮನವಿ ಮಾಡಿಕೊಂಡರು.