ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಮನೆಯಲ್ಲಿದ್ದ ಎಲ್ಲಾ ಸಾಮಾಗ್ರಿಗಳು, ಚಿನ್ನಾಭರಣ, ನಗ-ನಗದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಮೇ 18ರ ಮಂಗಳವಾರ ಪಾಣಮಂಗಳೂರು ಸಮೀಪದ ಆಲಡ್ಕ ಮಸೀದಿ ಬಳಿಯ ವಸತಿ ಸಂಕೀರ್ಣದಲ್ಲಿ ನಡೆದಿದೆ.
ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಆದರೆ, ಮನೆಯೊಳಗಿನ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದವು.
ಉದ್ಯಮಿ ಹನೀಫ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಮಂದಿ ಸಂಬಂಧಿರೋರ್ವರು ಮರಣ ಹೊಂದಿದ ಹಿನ್ನೆಲೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮನೆಯೊಳಗಿದ್ದ ಎಲೆಕ್ಟ್ರಿಕ್ ಉಪಕರಣಗಳು, ಪೀಠೋಪಕರಣಗಳು, ಬಟ್ಟೆಬರೆಗಳು, 50 ಸಾವಿರ ನಗದು, 20 ಪವನ್ ಚಿನ್ನಾಭರಣಗಳು, ಪ್ರಮುಖ ದಾಖಲೆಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ಅವಘಡದಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎನ್ನಲಾಗಿದೆ.
ಸ್ಥಳೀಯ ಕೌನ್ಸಿಲರ್ ಅಬೂಬಕರ್ ಸಿದ್ದಿಕ್, ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು, ಸ್ಥಳೀಯ ಯುವಕರು ಕೈಜೋಡಿಸಿದ್ದಾರೆ.