ಬೆಂಗಳೂರು, ಮೇ 21: ಸರ್ಕಾರ ಜನರಿಗೆ ಉಚಿತವಾಗಿ ನೀಡಲೆಂದು ಒದಗಿಸಿರುವ ಲಸಿಕೆಗಳನ್ನು ಖಾಸಗಿ ಸ್ಥಳಗಳಲ್ಲಿ ಜನರಿಗೆ ಹಾಕಿ ವೈದ್ಯೆ ಸೇರಿ ಇಬ್ಬರು ಹಣ ಪಡೆಯುತ್ತಿ ಘಟನೆ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ವೈದ್ಯೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪುಷ್ಪಿತಾ ಹಾಗೂ ಅನ್ನಪೂರ್ಣೇಶ್ವರಿನಗರದ ಐಟಿಐ ಲೇಔಟ್ ನಿವಾಸಿ ಪ್ರೇಮಾ.
ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ, ವೈದ್ಯೆ ಹಾಗೂ ಪ್ರೇಮಾ ಇಬ್ಬರು ಸೇರಿ ಪ್ರೇಮಾಳ ನಿವಾಸದಲ್ಲೇ ಪ್ರತಿದಿನ ಸಂಜೆ 4 ಗಂಟೆಯಿಂದ ಲಸಿಕೆ ನೀಡುತ್ತಿದ್ದರು. ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ಉಚಿತವಾಗಿ ಲಭಿಸುವ ಈ ಲಸಿಕೆಯಲ್ಲಿ ಕೆಲವು ಲಸಿಕೆಗಳನ್ನು ಇವರಿಬ್ಬರು ತಮ್ಮ ನಿವಾಸಕ್ಕೆ ತಂದು ಜನರಿಗೆ ಹಾಕುವುದಲ್ಲದೇ ಜನರಿಂದ 500 ರೂಪಾಯಿ ಪಡೆಯುತ್ತಿದ್ದರು. ನೆರೆಹೊರೆಯವರು ಬಂದು ಹಣ ನೀಡಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ನಮಗೆ ಮಾಹಿತಿ ಲಭಿಸಿದ ನಾವು ಕಾರ್ಯಚರಣೆ ಕೈಗೊಂಡೆವು ಎಂದು ಹೇಳಿದ್ದಾರೆ.
ಲಸಿಕೆ ಪಡೆಯುವ ಸಾರ್ವಜನಿಕರಂತೆ ಇನ್‌ಸ್ಪೆಕ್ಟರ್ ಲೋಹಿತ್ ನೇತೃತ್ವದ ತಂಡ ಪ್ರೇಮಾಳ ನಿವಾಸಕ್ಕೆ ತೆರಳಿದ್ದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಈಗಾಗಲೇ ನೂರಾರು ಜನರಿಗೆ ಲಸಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಕೂಡಾ ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ಲಸಿಕಾ ಅಭಿಯಾನವು ಜನವರಿ 16 ರಿಂದ ಆರಂಭವಾಗಿದೆ. ಕರ್ನಾಟಕದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಚಾಲನೆ ನೀಡಲಾಗಿದ್ದರೂ ಲಸಿಕೆ ಕೊರತೆ ಹಿನ್ನೆಲೆ ಮೇ 22 ರಿಂದ ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದು, ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ.