ನಳೀನ್ ಕುಮಾರ್ ಕಟೀಲ್, ಪಿ.ಎಸ್. ಪ್ರಕಾಶ್ ರಾಜಕೀಯ ಹಿತಾಸಕ್ತಿಗಾಗಿ ಹಿಂದೂಗಳ ಮೇಲೆ ಸವಾರಿ – ಸತ್ಯಜಿತ್ ಸುರತ್ಕಲ್
ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಸಂಘಟನೆಯಲ್ಲಿ ಎರಡು ದಶಕದಿಂದಲೂ ಹೆಚ್ಚು ಬಿಜೆಪಿ ಪಕ್ಷದ ಏಳಿಗೆಗಾಗಿ ದುಡಿದ ನನ್ನನು ಪಕ್ಷದಲ್ಲಿ ಕಡೆಗಣಿಸಲಾಗಿದ್ದು, ನನಗೆ ಟಿಕೆಟ್ ಕೈ ತಪ್ಪಲು ಸಂಸದ ನಳೀನ್ ಕುಮಾರ್ ಕಟೀಲ್ ನೇರ ಕಾರಣ ಎಂದು ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.
ಹೊಸಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , ನನಗೆ ಟಿಕೆಟ್ ಕೈತಪ್ಪಲು ನಳೀನ್ ಕುಮಾರ್ ಕಟೀಲ್, ಹಾಗೂ ಸಂಘದ ಪ್ರಮುಖರಾದ ಪಿ.ಎಸ್. ಪ್ರಕಾಶ್ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ . ನನ್ನ ಹಿತೈಷಿಗಳು, ಅಭಿಮಾನಿಗಳು ಪಕ್ಷೇತರನಾಗಿ ಸ್ಪರ್ಧಿಸಲು ಒತ್ತಾಯಿಸಿದ್ದಾರೆ. ಆದರೂ ನಾನು , ನಾಳೆ (ಏ 23) ಬೆಳಗ್ಗೆ 10 ಗಂಟೆಯವರೆಗೆ ಸಮಯ ನೀಡುತ್ತೇನೆ. ತಪ್ಪು ತಿದ್ದಿಕೊಳ್ಳಲು ಇನ್ನೂ ಅವರಿಗೆ ಸಮಯಾವಕಾಶ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
https://youtu.be/jmp9pympcjI
ಯಾವ ಕಾರಣಕ್ಕೆ ನನಗೆ ಟಿಕೆಟ್ ನಿರಾಕರಿಸಿದ್ದೀರಿ ಎಂಬುದಕ್ಕೆ ಸ್ಪಷ್ಟ ಮಾಹಿತಿ ಕೊಡಿ. ಹಾಗೆಂದು ಸರ್ವೇ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ ಎಂಬುದನ್ನ ನಾನು ಒಪ್ಪಲಾರೆ.ಅಥವಾ ಕೇಂದ್ರ ನಾಯಕರ ತೀರ್ಮಾನ ಎಂಬುದನ್ನ ನಾನು ನಂಬಲು ಸಿದ್ದನಿಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ಸಂಸದ ಕಟೀಲ್ ಪರ ಕಾರ್ಯನಿರ್ವಹಿಸಿದ್ದೆ. ಆದರೆ ಇದೀಗ ನಳೀನ್ ಕುಮಾರ್ ಕಟೀಲ್ ಅವರು ನನಗೆ ಟಿಕೆಟ್ ನೀಡದಂತೆ ತಡೆದಿದ್ದಾರೆ ಎಂದು ಆರೋಪಿಸಿದರು.
ಸತ್ಯಜಿತ್ ಸುರತ್ಕಲ್ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ , ಹಾಗೂ ಜಿಲ್ಲೆಯಲ್ಲಿ ಬಂಟ ಸಮಾಜಕ್ಕೆ ಹೆಚ್ಚಿನ ಸ್ಥಾನ ನೀಡಿ , ಬಿಲ್ಲವರನ್ನು ತೀವ್ರವಾಗಿ ಕಡೆಗಣಿಸಿರುವ ಕಾರಣಕ್ಕಾಗಿ, ಇಂದು ಹೊಸಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸತ್ಯಜಿತ್ ಅಭಿಮಾನಿಗಳ ಮತ್ತು ಬೆಂಬಲಿಗರ ಸಭೆ ಕರೆಯಲಾಗಿತ್ತು.