Sunday, November 24, 2024
ಸುದ್ದಿ

‘ಲಾಕ್ ಡೌನ್ ಪರಿಹಾರ’ ಪಡೆಯಲು ಅರ್ಜಿಸಲ್ಲಿಸುವ ಬಗ್ಗೆ ‘ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ’ರಿಗೆ ಬಹು ಮುಖ್ಯಮಾಹಿತಿ.!-ಕಹಳೆ ನ್ಯೂಸ್

ಬೆಂಗಳೂರು : ಕೋವಿಡ್-19 2ನೇ ಅಲೆಯ ತೀವ್ರತೆಯ ಹಿನ್ನಲೆಯಲ್ಲಿ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿದ್ದರಿಂದಾಗಿ, ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂಕಷ್ಟದಲ್ಲಿರುವವರಿಗೆ ರಾಜ್ಯ ಸರ್ಕಾರ 3 ಸಾವಿರ ಪರಿಹಾರ ಧನವನ್ನು ಘೋಷಣೆ ಮಾಡಿತ್ತು. ಈ ಪರಿಹಾರ ಧನವನ್ನು ಯಾವ ರೀತಿಯಲ್ಲಿ ಪಡೆಯಬೇಕು ಎಂಬುದಾಗಿ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಸಾರಿಗೆ ಇಲಾಖೆ ಮುಖ್ಯ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಸತ್ಯವತಿ ನಡವಳಿಗಳು ಹೊರಡಿಸಿದ್ದು, ಕೋವಿಡ್-19 2ನೇ ಅಲೆಯ ಹಿನ್ನಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ, ಆದೇಶಿಸಿರುವುದರಿಂದ, ಮುಖ್ಯಮಂತ್ರಿಯವರು ದಿನಾಂಕ 19-05-2021ರ ಪತ್ರಿಕಾ ಪ್ರಕಟಣೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದೆಂದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ನೀಡಲು ಘೋಷಣೆಗಳನ್ನು ಮಾಡಿರುತ್ತಾರೆ. ಆ ಪೈಕಿ ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ನೀಡಲು ಘೋಷಣೆ ಮಾಡಿರುತ್ತಾರೆ. ಆ ಪೈಕಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಗಳ ಪ್ರತಿ ಚಾಲಕರುಗಳಿಗೆ ರೂ.3,000ಗಳ ಪರಿಹಾರ ಧನವನ್ನು ನೀಡಲು ಘೋಷಣೆ ಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರವು ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಪರಿಹಾರ ಧನ ನೀಡುವ ಸಲುವಾಗಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ಆನ್ ಲೈನ್ ಸೇವಾಸಿಂಧು ವೆಬ್ ಪೋರ್ಟಲ್ ಮುಖಾಂತರ ಪರಿಹಾರ ಪಾವತಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರವು ಕೋವಿಡ್-19 ಅಲೆಯ ತೀವ್ರತೆಯ ಹಿನ್ನಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ, ಆದೇಶಿಸಿರುವುದರಿಂದ, ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ರೂ.3,000ಗಳ ಪರಿಹಾರ ಧನವನ್ನು ನೀಡಲು ಈ ಕೆಳಕಂಡ ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದೆ

  • ಎಲ್ಲಾ ಅರ್ಜಿಗಳು ಸೇವಾಸಿಂಧು ಪೋರ್ಟಲ್ ( https://sevasindhu.karnataka.gov.in/ ) ಮೂಲಕವೇ ಸ್ವೀಕೃತವಾಗತಕ್ಕದ್ದು.
  • ದಿನಾಂಕ 24-04-2021ರಂದು ಚಾಲನೆ ಪರವಾನಗಿ ಪ್ರಮಾಣಪತ್ರ ( Driving License ) ಹೊಂದಿರುವ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರುಗಳಿಗೆ ಮಾತ್ರ ಅನ್ವಯಿಸತಕ್ಕದ್ದು. ದಿನಾಂಕ 24-04-2021ರಂದು ಚಾಲ್ತಿಯಲ್ಲಿದ್ದ ಚಾಲಕರ ಪರವಾನಗಿ ( Driving License ) ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳಿಲ್ಲದಂತೆ ಖಚಿತವಡಿಸಿಕೊಳ್ಳತಕ್ಕದ್ದು.
  • ಒಂದು ವಾಹನಕ್ಕೆ ಒಬ್ಬ ಚಾಲಕರಂತೆ ಮಾತ್ರ ಈ ನಗದು ಸೌಲಭ್ಯವನ್ನು ಪಡೆಯಲು ಅರ್ಹರಾಗಿರತಕ್ಕದ್ದು.
  • ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಸಂಖ್ಯೆ ಮೂರು ಆಂಶಗಳು ಎಲ್ಲಾ ಫಲಾನುಭವಿಗಳಿಗೆ ಅನನ್ಯವಾಗಿರುವುದು ಕಡ್ಡಾಯವಾಗಿರುತಕ್ಕದ್ದು.
  • ಪರಿಹಾರ ಧನವು ಕೇವಲ ಚಾಲನೆ ಪರವಾನಗಿ ಪ್ರಮಾಣಪತ್ರವನ್ನು ಹೊಂದಿರುವ ಹಾಗೂ ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ DBT ಮುಖಾಂತರವೇ ಸಂದಾಯವಾಗತಕ್ಕದ್ದು.
  • ಒಂದು ವೇಳೆ ಕೆಲವೊಂದು ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಹೆಚ್ಚಿನ ಸಂಖ್ಯೆಯ ಆಟೋ, ಟ್ಯಾಕ್ಸಿ, ಮ್ಯಾಕ್ಸಿಗಳನ್ನು ಹೊಂದಿದ್ದು, ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆಯನ್ನು ಎದುರಿಸುತ್ತಿರುವ ಚಾಲಕರಿಗೆ ಸಿಗದಂತೆಯಾಗುತ್ತದೆ. ಆದುದರಿಂದ Duplication or Double Payment ಆಗದಂತೆ, ಅವರುಗಳ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗೆ ಅನನ್ಯವಾಗಿ ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ ವರ್ಗಾಯಿಸತಕ್ಕದ್ದು.
  • ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರುಗಳಿಗೆ ಪರಿಹಾರಧನ ನೀಡುವ ಸಲುವಾಗಿ ಅರ್ಹ ಫಲಾನುಭವಿಗಳಿಂದ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ಆನ್ ಲೈನ್ ಮುಖಾಂತರ ಪರಿಹಾರ ಪಾವತಿಸಲು ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
  • ಈ ಹಂತದಲ್ಲಿ ಸರ್ಕಾರ ಮತ್ತು ಫಲಾನುಭವಿಗಳ ನೇರ ಸಂಪರ್ಕವಿರತಕ್ಕದ್ದು, ಯಾವುದೇ ಮಧ್ಯಂತರ ಸಂಪರ್ಕ ಇರತಕ್ಕದ್ದಲ್ಲ.

ಕೆಲವೊಮ್ಮೆ ಫಲಾನುಭವಿಗಳ ಅರ್ಥಿಕ ಸ್ಥಿತಿ ಉತ್ತಮವಾಗಿದ್ದು, ಅವರುಗಳಿಗೆ ಪರಿಹಾರ ನೀಡುವ ಅಗತ್ಯತೆಯ ಬಗ್ಗೆ ಗಮನಹರಿಸಿ, ಅರ್ಹ ಫಲಾನುಭವಿಗಳಿಂದ ನಿರ್ಬಂಧದ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿಲ್ಲದಿರುವ ಬಗ್ಗೆ ಸ್ವಯಂ ದೃಢೀಕರಣ ಪಡೆದು ಪರಿಹಾರ ನೀಡಲು ಅಗತ್ಯ ಕ್ರಮವಹಿಸತಕ್ಕದ್ದು.

 

ಮೇಲಿನ ಷರತ್ತು ಮತ್ತು ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡು ಸೇವಾಸಿಂಧು ಪೋರ್ಟಲ್ ಮುಖಾಂತರ ಯೋಜನೆಯನ್ನು ಅನುಷ್ಠಾನಗೊಳಿಸಲು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರು ಅಗತ್ಯ ಕ್ರಮವಹಿಸತಕ್ಕದ್ದು ಎಂದಿದ್ದಾರೆ.