ಯಾಸ್ ಚಂಡಮಾರುತ: ‘ಅಪಾಯದ ಸ್ಥಳಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ’ ; ಪ್ರಧಾನಿ ನರೇಂದ್ರ ಮೋದಿ ಸೂಚನೆ – ಕಹಳೆ ನ್ಯೂಸ್
ನವದೆಹಲಿ, ಮೇ.23 : ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿ ನಿರ್ವಹಿಸಲು ಒಡಿಶಾ ಹಾಗೂ ಪಶ್ಚಿಮಬಂಗಾಳ ಕೈಗೊಂಡಿರುವ ಪೂರ್ವ ಸಿದ್ದತೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲಿಸಿದ್ದಾರೆ.
ಈ ಸೂಚನೆ ನೀಡಿದ ಪ್ರಧಾನಿ ಮೋದಿ ಅವರು, “ಜನರನ್ನು ಹೆಚ್ಚು ಅಪಾಯವಿರುವ ಸ್ಥಳಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಯಾಸ್ ಚಂಡಮಾರುತದ ಪರಿಣಾಮ ಸ್ಥಳದಲ್ಲಿ ವಿದ್ಯುತ್ ತೊಂದರೆ ಹಾಗೂ ಸಂವಹನ ಸಂಪರ್ಕದ ಸಮಸ್ಯೆ ಕಂಡುಬಂದಲ್ಲಿ ಅದನ್ನು ತ್ವರಿತವಾಗಿ ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು” ಎಂದಿದ್ದಾರೆ.
“ಕೊರೊನಾ ಚಿಕಿತ್ಸೆ ಹಾಗೂ ಲಸಿಕೆಯ ಕುರಿತು ಯಾವುದೇ ರೀತಿಯಾದ ಕೊರತೆಯಾಗದಂತೆ ಗಮನಹರಿಸಬೇಕು” ಎಂದು ಸೂಚಿಸಿದ್ದಾರೆ.
“ಯಾಸ್ ಚಂಡಮಾರುತವು ಮೇ 26ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದ್ದು, ಭಾರೀ ಬಿರುಗಾಳಿ ಸ್ವರೂಪ ಪಡೆಯಲಿದೆ. ಮೇ 26ರ ಸಂಜೆಯ ವೇಳೆಗೆ ಗಂಟೆಗೆ 155 ರಿಂದ 165 ಕಿ.ಮೀ ವೇಗದಲ್ಲಿ ಬೀಸಲಿದ್ದು, ಉಭಯ ರಾಜ್ಯಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.