ಕುಡಿತದ ಮತ್ತಿನಲ್ಲಿ ಬೋಟ್ ಚಾಲನೆ, ಮೀನುಗಾರಿಕೆಗೆ ತೆರಳಿದ್ದ ಬೋಟ್ ಅವಘಡ ; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – ಕಹಳೆ ನ್ಯೂಸ್
ಮಂಗಳೂರು: ಕುಡಿತದ ಅಮಲಿನಲ್ಲಿ ಬೋಟ್ ಚಲಾಯಿಸಿದ ಪರಿಣಾಮ ಸಮುದ್ರ ಮಧ್ಯೆ ಮೀನುಗಾರಿಕಾ ಬೋಟ್ ಅವಘಡಕ್ಕೀಡಾದ ಘಟನೆ ಮಂಗಳೂರು ಉಳ್ಳಾಲ ಕೋಡಿ ಕಡಲ ತೀರದಲ್ಲಿ ನಡೆದಿದೆ.
ಮಂಗಳೂರಿನ ಉಳ್ಳಾಲದ ಅಶ್ರಫ್ ಎಂಬವರ ‘ಅಝಾನ್’ ಹೆಸರಿನ ಬೋಟ್ ನಸುಕಿನ ಜಾವ ರಾತ್ರಿ 1:30 ಸುಮಾರಿಗೆ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆಂದು ತೆರಳಿತ್ತು.
ಈ ಬೋಟ್ ನಲ್ಲಿ 10 ಮಂದಿ ತಮಿಳುನಾಡು ಮೂಲದ ಮೀನುಗಾರರಿದ್ದು ಅದರಲ್ಲಿ ಚಾಲಕ ಸೇರಿ ಐವರು ಕುಡಿತದ ಮತ್ತಿನಲ್ಲಿದ್ದರು. ಸಮುದ್ರ ಮಧ್ಯೆ ಕುಡಿತದ ಅಮಲಿನಲ್ಲಿ ಚಾಲಕ ಬೋಟನ್ನು ಇನ್ನೋರ್ವ ಮೀನುಗಾರನಿಗೆ ಚಲಾಯಿಸಲು ಕೊಟ್ಟಿದ್ದು ಅವಘಡಕ್ಕೆ ಕಾರಣವಾಗಿದೆ.
ಬೋಟ್ ದಡಕ್ಕೆ ಬಂದು ಅಪ್ಪಳಿಸಿದ್ದು ಸ್ಥಳೀಯರು ಇಂದು ಬೆಳಗ್ಗಿನ ಜಾವ ಎಲ್ಲಾ 10 ಮಂದಿ ಮೀನುಗಾರರನ್ನೂ ರಕ್ಷಣೆ ಮಾಡಿದ್ದಾರೆ. ಈ ವೇಳೆ ಮೀನುಗಾರರು ವಾಂತಿ ಮಾಡುತ್ತಿದ್ದ ಕಾರಣ ಕುಡಿದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.