ಸುಬ್ರಹ್ಮಣ್ಯ: ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಸುವ್ಯವಸ್ಥಿತವಾದ ಕೋವಿಡ್ ಕೇರ್ ಸೆಂಟರ್‌ನಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಭಾಗ್ಯ ಸಮೃದ್ಧಿಗೆ ಪೂರಕವಾಗಿದೆ.ಇಲ್ಲಿ ಸೋಂಕಿತರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಸರಕಾರದಿಂದ ಮಾಡಲಾಗಿದೆ.ಅಲ್ಲದೆ ಆಮ್ಲಜನಕ ಕನ್ಸಲೇಟರ್ ಅನ್ನು ಒದಗಿಸಿದ್ದೇನೆ.ಕಾಲಕಾಲಕ್ಕೆ ಬೇಕಾದ ಪೌಷ್ಠಿಕ ಆಹಾರವನ್ನು ವ್ಯವಸ್ಥಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.ಸರ್ವರೂ ಆರೋಗ್ಯ ರಕ್ಷಣೆಗೆ ಕರ ಜೋಡಿಸಬೇಕು.ನಮ್ಮೊಳಗೆ ಉಂಟಾಗುವ ಜಾಗೃತಿಯೇ ರೋಗ ನಿವಾರಣೆಗೆ ಸಂಜೀವಿನಿಯಾದುದರಿಂದ ಸರ್ವರೂ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.ಯಾವುದೇ ಸಮಸ್ಯೆಗಳು ಬಂದಲ್ಲಿ ಶಾಸಕರ ವಾರ್‌ರೂಂಗೆ ಕರೆ ಮಾಡಿ ತಕ್ಷಣವೇ ಕಾರ್ಯಕರ್ತರು ತಮ್ಮ ಸಹಾಯಕ್ಕೆ ಧಾವಿಸುತ್ತಾರೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ಆರಂಭಿಸಿದ ನೂತನ ಕೋವಿಡ್ ಕೇರ್ ಸೆಂಟರ್ ಅನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೊರೋನಾ ಸೋಂಕು ಅಧಿಕವಾಗಿ ಹರಡುವ ಕಾರಣ ಇನ್ನು ಮುಂದೆ ಮನೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಇರುವುದಿಲ್ಲ.ಸೋಂಕಿತರು ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕು. ಇಲ್ಲಿ ವ್ಯವಸ್ಥಿತವಾದ ಚಿಕಿತ್ಸೆ ನೀಡಲು ಬೇಕಾದ ವ್ಯವಸ್ಥೆ ಮಾಡಲಾಗಿದೆ.ಆದುದರಿಂದ ಯಾರಿಗೂ ಭಯ ಬೇಡ ಧೈರ್ಯದಿಂದ ಕೊರೋನಾವನ್ನು ಹಿಮ್ಮೆಟ್ಟಿಸೋಣ. ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುವುದರಿಂದ ಕೊರೋನಾ ಹರಡುವುದನ್ನು ಗಣನೀಯವಾಗಿ ತಡೆಯಬಹುದು.ಆದುರಿಂದ ಸರ್ವರೂ ಸಹಕಾರ ನೀಡಬೇಕು ಎಂದರು.
ಆಮ್ಲಜನಜಕ ಕನ್ಸಲೇಟರ್ ಹಸ್ತಾಂತರ:
ಈ ಸಂದರ್ಭದಲ್ಲಿ ಸಚಿವರು ವೈಯಕ್ತಿಕವಾಗಿ ಎರಡು ಆಮ್ಲಜನಕ ಕನ್ಸಲೇಟರ್ ಅನ್ನು ಕೋವಿಡ್ ಕೇರ್ ಸೆಂಟರ್‌ಗೆ ಹಸ್ತಾಂತರಿಸಿದರು. ಸ್ವಾತಃ ಸಚಿವರೇ ವೈಯಕ್ತಿಕವಾಗಿ ಕನ್ಸಲೇಟರ್ ಒದಗಿಸುವ ಮೂಲಕ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುವವರಿಗೆ ಆಮ್ಲಜನಕದ ಸಮಸ್ಯೆ ಬಾಧಿಸದಂತೆ ವ್ಯವಸ್ಥೆ ಮಾಡಿದರು.ಸಚಿವರ ಈ ಕಾರ್ಯವು ಶ್ಲಾಘನೆಗೆ ಪಾತ್ರವಾಯಿತು.
ಸಮಗ್ರ ಪರಿಶೀಲನೆ:
ಬಳಿಕ ಸಚಿವರು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಹಾಸಿಗೆಗಳು, ಶೌಚಾಲಯ, ಅಡುಗೆ ಕೋಣೆ, ನೀರಾವರಿ ಸೇರಿದಂತೆ ಇತರ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು.ಅಲ್ಲದೆ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಬಳಿಕ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕೊರೋನಾ ಕಾರ್ಯಪಡೆ ಸದಸ್ಯರೊಂದಿಗೆ ಸಭೆ ನಡೆಸಿ ಕುಂದು ಕೊರತೆಗಳ ಬಗ್ಗೆ ತಿಳಿದುಕೊಂಡರು.ಅಲ್ಲದೆ ಕಾರ್ಯತತ್ಪರ ಕಾರ್ಯ ನೆರವೇರಿಸಲು ಕೊರೋನಾ ಕಾರ್ಯಪಡೆಗೆ ಧೈರ್ಯ ತುಂಬಿದರು.
ಈ ಸಂದರ್ಭ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಹಿರಿಯ ವೈದ್ಯ ಡಾ.ರಾಮಯ್ಯ ಭಟ್, ಪ್ರಮುಖರಾದ ಸುಬ್ರಹ್ಮಣ್ಯ ಕುಳ, ಕಾರ್ಯಪ್ಪ ಗೌಡ ಚಿದ್ಗಲ್ ಉಪಸ್ಥಿತರಿದ್ದರು.
ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಸುವ್ಯವಸ್ಥಿತವಾದ ಕೋವಿಡ್ ಕೇರ್ ಸೆಂಟರ್‌ಗೆ ಸಚಿವ ಎಸ್.ಅಂಗಾರ ವೈಯಕ್ತಿಕವಾಗಿ ಎರಡು ಆಮ್ಲಜನಕ ಕನ್ಸಲೇಟರ್ ಅನ್ನು ಹಸ್ತಾಂತರಿಸಿದರು.ಈ ಸಂದರ್ಭ ಡಾ.ಯತೀಶ್ ಉಳ್ಳಾಲ್, ಡಾ.ಮಂಜುನಾಥ್, ಡಾ.ರಾಮಯ್ಯ ಭಟ್, ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.