ಕೊರೋನಾದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮಗ ಹೃದಯಾಘಾತದಿಂದಾಗಿ ಮೃತಪಟ್ಟಿರುವ ಘಟನೆ ಜೂ.2 ರಂದು ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳದಲ್ಲಿ ನಡೆದಿದೆ.
ಪುಣಚ ಬೈಲುಗುತ್ತು ಕೊಪ್ಪಳ ನಿವಾಸಿ ಕೆಪಿಟಿ ನಿವೃತ್ತ ಪ್ರೊಫೇಸರ್ ಭುಜಂಗ ಶೆಟ್ಟಿ(85)ರವರ ಕೋವಿಡ್‌ನಿಂದ ಜೂ.1ರಂದು ರಾತ್ರಿ ಮೃತಪಟ್ಟಿದ್ದರು. ಅವರು ಮೃತದೇಹದ ಅಂತಿಮ ಸಂಸ್ಕಾರವು ಜೂ.2 ರಂದು ಬೈಲುಗುತ್ತು ಕೊಪ್ಪಳ ಅವರ ನಿವಾಸದಲ್ಲಿ ಕೋವಿಡ್ ನಿಯಮಾವಳಿಯೊಂದಿಗೆ ಪುತ್ತೂರು ಸೇವಾಭಾರತಿ ಕಾರ್‍ಯಕರ್ತರ ಸಹಕಾರದಲ್ಲಿ ಕೊಪ್ಪಳ ಮನೆಯಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸಲಾಯಿತು.
ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದ ಭುಜಂಗ ಶೆಟ್ಟಿಯವರ ಕಿರಿಯ ಪುತ್ರ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿರುವ ಶೈಲೇಶ್ ಶೆಟ್ಟಿ(44)ಯವರು ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗಾಗಲೇ ಅವರು ಕೊನೆಯುಸಿರೆಲೆದಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಶೈಲೇಶ್‌ರವರು ಪತ್ನಿ ಸರಿತಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು…!
ಡಿಪ್ಲೋಮಾ ಇನ್ ಮೆಕಾನಿಕಲ್ ವಿದ್ಯಾಭ್ಯಾಸ ಪಡೆದಿರುವ ಶೈಲೇಶ್ ಶೆಟ್ಟಿಯವರು ಕಳೆದ ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು ಹಾರಾಡಿಯಲ್ಲಿರುವ ಮನೆಯಲ್ಲಿ ವಾಸ್ತವ್ಯವಿದ್ದರು.
ಮನೆ ಮಂದಿಗೆ ಪಾಸಿಟಿವ್?
ಮೃತ ಭುಜಂಗ ಶೆಟ್ಟಿಯವರ ಮನೆಯಲ್ಲಿ ಅವರ ಪತ್ನಿಯ ಹೊರತಾಗಿ ಇತರರೆಲ್ಲರಿಗೂ ಕೊರೋನಾ ಪಾಸಿಟಿವ್ ವರದಿ ಬಂದಿರುವುದಾಗಿ ತಿಳಿದ್ದುಬಂದಿದೆ. ಮೃತ ಶೈಲೇಶ್‌ರವರು ಹಾರಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು ಅವರಿಗೆ ಕೊರೋನಾ ಸೋಂಕು ಬಾಧಿಸಿರಲಿಲ್ಲ ತಿಳಿದು ತಿಳಿದುಬಂದಿದೆ.