ಚಿತ್ತೂರು: ಈಗಾಗಲೇ ಮುಂಗಾರು ಆರಂಭವಾಗಿದ್ದು, ಹಲವೆಡೆ ಗುಡುಗು ಮಳೆಯಾಗುತ್ತಿದೆ. ಇದೀಗ ಯುವಕರು ಕ್ರಿಕೆಟ್ ಆಡುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಚಿತ್ತೂರಿನ ಮದನಪಲ್ಲೆ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಈಶ್ವರಮ್ಮ ಕಾಲೋನಿ ಯುವಕರು ಶುಕ್ರವಾರ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಸಿಡಿಲು ಅಪ್ಪಳಿಸಿದ್ದು, 9 ಯುವಕರು ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರೋಷನ್ (25) ಎಂಬ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಯುವಕ ಆರೀಫ್ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿಗೆ ಕರೆದೊಯ್ಯಲಾಗಿದೆ. ಇನ್ನುಳಿದ ಏಳು ಯುವಕರ ಸ್ಥಿತಿ ಕೂಡ ಗಂಭೀರವಾಗಿದೆ. ಘಟನೆ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.