ಕೋವಿಡ್ ವಾರಿಯರ್ಸ್‌ಗೆ 5 ಲಕ್ಷ ರೂ. ಜೀವ ವಿಮೆ ಮಾಡಿಸಿದ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್- ಕಹಳೆ ನ್ಯೂಸ್
ಮಂಗಳೂರು, ಜೂನ್ 7: ಕೊರೊನಾ ಸೋಂಕಿನ ಈ ಸಂಕಷ್ಟದ ಸಂದರ್ಭದಲ್ಲಿ ಹಲವು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿ ತೊಂದರೆಗೆ ಒಳಗಾದವರಿಗಾಗಿ ಮಂಗಳೂರಿನಲ್ಲಿ ಟ್ರಸ್ಟ್ ಒಂದು ಹಗಲಿರುಳು ಕೆಲಸ ಮಾಡುತ್ತಿದೆ. ನಿರ್ಗತಿಕರಿಗೆ ಮೂರು ಹೊತ್ತು ಅನ್ನ, ಆಹಾರ ನೀಡುವುದರ ಜೊತೆಗೆ ಸಶ್ಮಾನದಲ್ಲಿ ಹೆಣ ಸುಡುವ ಕೋವಿಡ್ ವಾರಿಯರ್ಸ್‌ಗೆ ಜೀವವಿಮೆಯನ್ನು ಮಾಡಿಸಿದೆ.
ಕೊರೊನಾ ಅಂದ್ರೇನೆ ಒಂದಲ್ಲ ಒಂದು ಸಮಸ್ಯೆ. ಈ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಶವ ಸುಡುವುದು ಸಹ ಅತ್ಯಂತ ಸವಾಲಿನ ಕೆಲಸ. ಹೀಗಾಗಿ ಶವ ಸುಡುವವರ ಪ್ರಾಣ ಕೂಡ ಅಮೂಲ್ಯವೆಂದು ಅರಿತ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾದರಿ ಕಾರ್ಯಕ್ಕೆ ಮುಂದಾಗಿದೆ.
ಮಂಗಳೂರು ನಗರದ ಸ್ಮಶಾನದಲ್ಲಿ ಕೆಲಸ ಮಾಡುವವರ ಕುಟುಂಬಕ್ಕೆ ಐದು ಲಕ್ಷಗಳ ಜೀವವಿಮೆಯನ್ನು ಮಾಡಿಸಿದೆ. ಇದರ ಜೊತೆ ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್, ಭಜರಂಗದಳದ ವಾರಿಯರ್ಸ್‌ಗೂ ಈ ವಿಮೆ ಮಾಡಿಸಲಾಗಿದೆ. ತಲಾ ಐದು-ಐದು ಲಕ್ಷದ ವಿಮೆಯನ್ನು ಒಟ್ಟು 42 ಜನರಿಗೆ ಮಾಡಲಾಗಿದೆ.
ಇದರ ಜೊತೆ ನಿರ್ಗತಿಕರಾಗಿ ಬಸ್ ಸ್ಟ್ಯಾಂಡ್, ರಸ್ತೆ ಬದಿಯಲ್ಲಿರುವುವರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ, ಸಂಜೆ ಚಹಾ-ತಿಂಡಿಯನ್ನು ನೀಡುತ್ತಿದ್ದಾರೆ. ನಿತ್ಯ 5000 ಮಂದಿಗೆ ಊಟ, 600 ಮಂದಿಗೆ ಫಲಹಾರವನ್ನು ನೀಡಲಾಗುತ್ತಿದೆ. ಇವರಿಗೆ ಮಳೆಯಿಂದ ರಕ್ಷಣೆಗಾಗಿ ಕ್ಯಾಪ್, ಟೀ ಶರ್ಟ್, ಟವೆಲ್‌ನ್ನು ನೀಡಲಾಗಿದೆ.
ಇನ್ನು ಕೊರೊನಾ ಸೋಂಕಿಗೆ ಒಳಗಾಗಿ ಮನೆಯಲ್ಲಿ ಆಹಾರ ತಯಾರಿಸಿಕೊಳ್ಳಲು ಸಾಧ್ಯವಾಗದವರಿಗೂ ಮೂರು ಹೊತ್ತಿನ ಆಹಾರವನ್ನು ಅವರ ಮನೆಗೆ ತಲುಪಿಸುವ ಕೆಲಸವನ್ನು ಈ ಟ್ರಸ್ಟ್ ಮಾಡುತ್ತಿದೆ. ನಗರದ ಎಂಟು ಪೊಲೀಸ್ ಠಾಣೆಗೆ, ಚೆಕ್ ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ಕೋವಿಡ್ ಆಸ್ಪತ್ರೆಗೂ ಆಹಾರವನ್ನು ನೀಡಲಾಗುತ್ತಿದೆ.
ಟ್ರಸ್ಟ್‌ನಲ್ಲಿ ಒಟ್ಟು 44 ಮಂದಿ ಸದಸ್ಯರಿದ್ದು ಎಲ್ಲರೂ ನಿಸ್ವಾರ್ಥರಹಿತವಾಗಿ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಇದರ ಜೊತೆ ಆಂಬ್ಯುಲೆನ್ಸ್ ಸೇವೆಯನ್ನು ನೀಡಲಾಗುತ್ತಿದೆ.
ತೊಂದರೆಗೆ ಒಳಗಾದವರೂ ಈ ಟ್ರಸ್ಟ್‌ನ ಸಹಾಯವಾಣಿ ನಂಬರ್‌ಗೆ ಕಾಲ್ ಮಾಡಿದರೆ ಸಾಕು ಇವರಿಂದಾದ ಸೇವೆಯನ್ನು ಟ್ರಸ್ಟ್‌ನ ಸದಸ್ಯರು ಮಾಡುತ್ತಾರೆ. ಒಟ್ಟಿನಲ್ಲಿ ಮಂಗಳೂರಿನ ಈ ಸೇವಾಂಜಲಿ ಟ್ರಸ್ಟ್‌ನ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದಾಗಿದೆ