ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಪರಿಹಾರ ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದು, ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಓರ್ವ ಸದಸ್ಯ ಕೊರೋನಾದಿಂದ ಸಾವನ್ನಪ್ಪಿದರೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆ ಅನ್ವಯಿಸಲಿದೆ. ಒಂದು ಕುಟುಂಬದಲ್ಲಿ ಎಷ್ಟೇ ಮಂದಿ ಕೊರೊನಾದಿಂದ ಸತ್ತಿದ್ದರು ಒಬ್ಬರ ಸಾವಿಗೆ ಮಾತ್ರ ಪರಿಹಾರ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,913 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ BPL ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಒಬ್ಬರ ಸಾವಿಗೆ ಪರಿಹಾರ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 250ರಿಂದ 300 ಕೋಟಿಗಳಷ್ಟು ಹಣವನ್ನು ಮೀಸಲಿಟ್ಟಿದೆ. ಇದರಿಂದ ಸುಮಾರು 25 ಸಾವಿರ ಬಿಪಿಎಲ್ ಕುಟುಂಬ ವರ್ಗದವರಿಗೆ ಪರಿಹಾರ ಸಿಗಲಿದೆ.
ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಇವತ್ತು ಹಣಕಾಸಿನ ಅಧಿಕಾರಿಗಳ ಜೊತೆಯೂ ಚರ್ಚೆ ಮಾಡಿದ್ದೇನೆ. ಈಗ ಬಿಪಿಎಲ್ ಕುಟುಂಬಕ್ಕೆ ಪರಿಹಾರ ನೀಡುತ್ತಿದ್ದೇವೆ. ಕೊರೊನಾದಿಂದ ಮೃತಪಟ್ಟವರ ಪರಿಹಾರ ಯೋಜನೆಗೆ 250-300 ಕೋಟಿ ಹಣ ವೆಚ್ಚವಾಗುತ್ತೆ ಎಂದು ಹೇಳಿದ್ದಾರೆ.