‘ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ, ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್’ ; ಆರು ತಿಂಗಳ ಬಳಿಕ ನಟಿ ರಾಗಿಣಿ ದ್ವಿವೇದಿ – ಕಹಳೆ ನ್ಯೂಸ್
ವಿಜಯಪುರ, ಜೂ.17 : ಹೆಣ್ಮಕ್ಕಳು ಅಂದರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತಿದ್ದು, ಅಂತೆಯೇ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಕೂಡ ಟಾರ್ಗೆಟ್ ಮಾಡಲಾಗಿದೆ ಎಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಸುಮಾರು ಆರು ತಿಂಗಳ ಬಳಿಕ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಈ ಕುರಿತು ಮಂಗಳಮುಖಿಯರಿಗೆ ಕೊರೊನಾ ಲಸಿಕೆ ಹಾಕುವ ಮತ್ತು ಆಹಾರದ ಕಿಟ್ ನೀಡುವ ಕಾರ್ಯಕ್ರಮದಲ್ಲ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಅಂದರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತಿದ್ದು, ಹೆಣ್ಮಕ್ಕಳನ್ನು ತುಂಬಾ ಸುಲಭವಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ” ಎಂದರು.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಹೇಳಿಕೆಗಳ ವಿಚಾರವಾಗಿ ಮಾತನಾಡಿದ ರಾಗಿಣಿ, “ಸಂಬರಗಿ ನಿಜವಾಗಿಯೂ ನನಗೆ ಪರಿಚಯವಿಲ್ಲ. ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ, ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಹಾಗಾಗಿ ಅವರನ್ನು ನಾನು ಕಂಟ್ರೋಲ್ ಮಾಡಲು ಆಗಲ್ಲಾ” ಎಂದಿದ್ದಾರೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ ಅವರು, “ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಮೇಲೆ ಅದು ಡಿಪೆಂಡ್ ಆಗಿರುತ್ತೆ. ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಜೀವನದಲ್ಲಿ ನನಗೆ ಅನುಭವ ಆಗಿಲ್ಲ. ಲೈಫ್ ನಲ್ಲಿ ಎರಡು ಥರದ ಜೀವನ ಇದ್ದು, ಒಂದು ಶಾರ್ಟ್ ಕಟ್, ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೀತಿವಿ, ಪ್ರತಿಯೊಂದು ಸ್ಟೆಪ್ ಬೈ ಸ್ಟೆಪ್ ಆಗುತ್ತದೆ. ಶಾರ್ಟ್ ಕಟ್ ತಗೊಂಡರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ. ಅತೀ ಶೀಘ್ರದಲ್ಲಿ ನೇಮು, ಫೇಮು, ದುಡ್ಡು ಗಳಿಸೋದನ್ನ ಬಿಟ್ಟು ನಮ್ಮ ಕೆಲಸದ ಮೇಲೆ ವಿಶ್ವಾಸವಿಟ್ಟು, ನಾವು ಏನು ಮಾಡುತ್ತೇವೆ ಅನ್ನೋದರ ಮೇಲೆ ಫೋಕಸ್ ಮಾಡಬೇಕು” ಎಂದು ಹೇಳಿದ್ದಾರೆ.
ಆಗಸ್ಟ್ 2020 ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಡ್ರಗ್ಸ್ ವಶಪಡಿಸಿಕೊಂಡ ಬಳಿಕ ಕನ್ನಡ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್‌ವುಡ್ ನಲ್ಲಿ ಕೆಲವು ಪಾರ್ಟಿಗಳಲ್ಲಿ ಡೌಗ್ಸ್ ಗಳನ್ನು ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದು, ಆಗಸ್ಟ್ 31 ರಂದು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಇಂದ್ರಜಿತ್ ಲಂಕೇಶ್ ರನ್ನು ಸುಮಾರು ಐದು ಗಂಟೆಗಳ ಕಾಲ ಪ್ರಶ್ನಿಸಿದ್ದು, ಕೆಲವರ ಹೆಸರನ್ನು ವಿಚಾರಣೆಯಲ್ಲಿ ಲಂಕೇಶ್ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 4, 2020 ರಂದು, ರಾಗಿಣಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯನ್ನು 2020 ರ ಸೆಪ್ಟೆಂಬರ್ 5 ರಂದು ಬಂಧಿಸಲಾಗಿದ್ದು, ಈ ಪ್ರಕರಣವನ್ನು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಎಂದು ಕರೆಯಲಾಯಿತು.